ಸುಳ್ಯ: ಅಂಜನಾದ್ರಿಯಲ್ಲಿ ಸಂಸ್ಕಾರವಾಹಿನಿ ಶಿಬಿರ ಉದ್ಘಾಟನೆ
ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಿಂದ ಆಯೋಜನೆ

ಸುಳ್ಯ: ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಸಂಸ್ಕಾರವಾಹಿನಿ ಬೇಸಿಗೆ ಶಿಬಿರವು ಮಾಯಿಲಕೋಟೆ ಅಂಜನಾದ್ರಿ ಶ್ರೀಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ವಠಾರದಲ್ಲಿ ಆರಂಭಗೊಂಡಿದೆ.
ಶಿಬಿರದ ಹಿರಿಯ ವಿದ್ಯಾರ್ಥಿಗಳಾದ ಶ್ರಾವ್ಯ, ಹರ್ಷಿಣಿ ಕೆ.ಎಸ್. ಹಾಗೂ ಅನುಷ್ಕಾ ರಾವ್ ದೇವ ಮತ್ತು ನಿವೃತ್ತ ಪ್ರಾಂಶುಪಾಲೆ ಯಶೋದಾ ರಾಮಚಂದ್ರ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಪುಟಾಣಿಗಳು, ಈ ಹಿಂದೆ ಶಿಬಿರದಲ್ಲಿ ಭಾಗಿಯಾದ ನಮಗೆ ಈ ಶಿಬಿರ ಯೋಗ್ಯ ಸಂಸ್ಕಾರವನ್ನು ಕಲಿಸಿಕೊಟ್ಟಿದೆ ಎಂದು ಹೇಳಿದರು. ಉದ್ಘಾಟನಾ ಭಾಷಣಗೈದ ಯಶೋದಾ ರಾಮಚಂದ್ರರವರು, ಇಂದು ಸಮಾಜದಲ್ಲಿ ಸಂವೇದನಾಶೀಲತೆ ಕಡಿಮೆಯಾಗಿದೆ. ಸಂಸ್ಕಾರದ ಕೊರತೆಯೇ ಇದಕ್ಕೆ ಕಾರಣ. ಸಂಸ್ಕಾರವೆಂಬುವುದು ಹೃದಯಕ್ಕೆ ನೀಡುವ ಶಿಕ್ಷಣ. ಔಪಚಾರಿಕ ಶಿಕ್ಷಣವನ್ನು ಮೀರಿದ, ಸಿಲೇಬಸ್ ಹಾಗೂ ಸಮಯದ ಹಂಗಿಲ್ಲದ ಸಂಸ್ಕಾರದ ಶಿಕ್ಷಣ ಪ್ರತಿ ಮನೆಗಳಲ್ಲೂ ನೀಡಿದರೆ ಮಾತ್ರ ಮಕ್ಕಳು ಸಮಾಜದ ಆಸ್ತಿಯಾಗಲು ಸಾಧ್ಯ ಎಂದು ಹೇಳಿದರು. ಕೇಶವ ಕೃಪಾ ಪ್ರತಿಷ್ಠಾನವು ತನ್ನ ಮೌನಕ್ರಾಂತಿಯ ಮೂಲಕ ಸಮಾಜಮುಖಿ ಮೌಲ್ಯವನ್ನು ಹೊಂದಿದೆ ಎಂದು ಯಶೋದಾ ರಾಮಚಂದ್ರ ಪ್ರಶಂಸಿಸಿದರು. ಕ್ಷೇತ್ರದ ಗೌರವಾಧ್ಯಕ್ಷ ಶಿವರಾಮ ರೈ ಕುರಿಯಗುತ್ತು ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು ಮುಖ್ಯ ಅತಿಥಿಯಾಗಿದ್ದರು. ಶಿಬಿರಾರ್ಥಿಗಳಿಗೆ ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ, ಭಗವದ್ಗಿತೆ, ಸ್ತ್ರೋತ ಸುಧಾ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್, ಶಿಬಿರದ ಸಂಚಾಲಕಿ ವಿನಯ ಆರ್. ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ್ ಭಟ್ ಸ್ವಾಗತಿಸಿ, ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀಕೃಷ್ಣ ಉಪಾಧ್ಯಾಯ ಪ್ರಸ್ತಾವನೆಗೈದರು. ವೇದ ವಿದ್ವಾಂಸ ಗಣೇಶ ಭಟ್ ವಂದಿಸಿದರು. ಕಮಲಾಕ್ಷ ನಂಗಾರು ಕಾರ್ಯಕ್ರಮ ನಿರೂಪಿಸಿದರು.





