ಸುಳ್ಯದಲ್ಲಿ ಯಕ್ಷ ಶಿಕ್ಷಣ ಕಾರ್ಯಾಗಾರ
ಸುಳ್ಯ: ಸುಳ್ಯದ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೇ 18ರಿಂದ 27ರ ತನಕ ಹತ್ತು ದಿನಗಳ ಯಕ್ಷ ಶಿಕ್ಷಣ ಕಾರ್ಯಾಗಾರ ನಡೆಯಲಿದೆ. ಕಳೆದ ಒಂದು ವರ್ಷದಿಂದ ಕೇಂದ್ರದ ಪ್ರಥಮ ತಂಡದಲ್ಲಿ ನಾಟ್ಯಾಭ್ಯಾಸ, ಭಾಗವತಿಕೆ ಮತ್ತು ಚೆಂಡೆ ಮದ್ದಳೆಯ ಬಗ್ಗೆ ತರಬೇತಿ ಪಡೆಯುತ್ತಿರುವ 50 ವಿದ್ಯಾರ್ಥಿಗಳು ಹಾಗೂ ಸೀಮಿತ ಸಾರ್ವಜನಿಕ ಆಸಕ್ತರಿಗಾಗಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಕಾರ್ಯಾಗಾರದಲ್ಲಿ ಪರಂಪರೆಯ ನಾಟ್ಯಾಭ್ಯಾಸ, ಅರ್ಥಗಾರಿಕೆ, ಹಿಮ್ಮೇಳ ಜ್ಞಾನ, ಬಣ್ಣಗಾರಿಕೆ, ವೇಷಭೂಷಣ, ರಂಗ ಪ್ರಜ್ಞೆ ಮುಂತಾದವುಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸಗಳ ಮೂಲಕ ಸೂಕ್ತ ತರಬೇತಿ ನೀಡಲಾಗುವುದು.
ಸಂಪನ್ಮೂಲ ವ್ಯಕ್ತಿಗಳಾಗಿ ನಾಟ್ಯ ಗುರು ಸಬ್ಬಣಕೋಡಿ ರಾಮ ಭಟ್, ಭಾಗವತ ವಿಶ್ವ ವಿನೋದ ಬನಾರಿ, ಅರ್ಥದಾರಿ ವೆಂಕಟರಮಣ ಭಟ್, ಹಿಮ್ಮೇಳ ವಾದಕ ವಳಕುಂಜ ಕುಮಾರ ಸುಬ್ರಹ್ಮಣ್ಯ, ಪ್ರಸಾಧನ ತಜ್ಞ ಮಹಾಬಲ ಕಲ್ಮಡ್ಕ, ಯಕ್ಷ ಗುರು ವಾಸುದೇವ ರೈ ಬೆಳ್ಳಾರೆ, ಯಕ್ಷ ಶಿಕ್ಷಕರಾದ ಪ್ರಕಾಶ್ ಮೂಡಿತ್ತಾಯ, ಲಿಂಗಪ್ಪ ಬೆಳ್ಳಾರೆ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಕೇಂದ್ರದ ಸಂಚಾಲಕ ಡಾ.ಸುಂದರ ಕೇನಾಜೆ ತಿಳಿಸಿದ್ದಾರೆ.





