ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ, ಕಾಂಗ್ರೆಸ್ ಗೆ ಅವಲಕ್ಕಿ ಕುಟ್ಟಿದಂತೆ : ಸುರೇಶ್ ಕುಮಾರ್ ವ್ಯಂಗ್ಯ

ಬೆಂಗಳೂರು,ಎ.12: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್. ಯಡಿಯೂರಪ್ಪ ಅವರನ್ನು ನೇಮಿಸಿರುವ ಹಿನ್ನೆಲೆಯಲ್ಲಿ ಗಾಬರಿಗೊಂಡಿರುವ ಕಾಂಗ್ರೆಸ್ ಮುಖಂಡರು ತಾಯತ ಕಟ್ಟಿಸಿಕೊಳ್ಳುವುದು ಸೂಕ್ತ ಎಂದು ಮಾಜಿ ಸಚಿವ, ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಇಂದಿಲ್ಲಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಕಂಡು ದಿಗಿಲುಗೊಂಡಿರುವ ಕಾಂಗ್ರೆಸ್ ನಾಯಕರ ಮನದಲ್ಲಿ ಅವಲಕ್ಕಿ ಕುಟ್ಟಿದಂತಾಗಿದೆ ಎಂದರು.
ಯಡಿಯೂರಪ್ಪ ಅವರ ವಿರುದ್ಧ ಕಾಂಗ್ರೆಸ್ ಮುಖಂಡರಾದ ವಿ.ಎಸ್. ಉಗ್ರಪ್ಪ, ಎಚ್.ಎಂ. ರೇವಣ್ಣ, ಅಶೋಕ್ ಪಟ್ಟಣ ಅವರು ಮಾಡಿರುವ ಆಪಾದನೆಗಳು ರಾಜಕೀಯ ಪ್ರೇರಿತವಾಗಿವೆ. ಯಡಿಯೂರಪ್ಪ ಪ್ರವಾಸ ಕೈಗೊಳ್ಳುವ ಸ್ಥಳಗಳಿಗೆ ತೆರಳಿ ಅವರ ಜಾತಕ ಬಯಲಿಗೆಳೆಯುವುದಾಗಿ ಹೇಳಿದ್ದಾರೆ. ನಮ್ಮ ನಾಯಕರನ್ನು ಜನ ಹೇಗೆ ಸ್ವಾಗತಿಸುತ್ತಾರೆ. ಅವರಿಗೆ ಹೇಗೆ ಆತಿಥ್ಯ ಸಿಗುತ್ತದೆ. ಅವರ ಬಗ್ಗೆ ಜನ ಏನು ಮಾತನಾಡುತ್ತಾರೆ ಎನ್ನುವುದನ್ನೂ ಸಹ ತಿಳಿದುಕೊಂಡು ಬರಲಿ ಎಂದು ವ್ಯಂಗ್ಯವಾಡಿದರು.
ರಾಜ್ಯ ಬರದಲ್ಲಿ ಬೇಯುತ್ತಿರುವಾಗ ಕಾಂಗ್ರೆಸ್ ಮುಖಂಡರು ತಮ್ಮ ಸರಕಾರದಿಂದ ಉತ್ತಮ ಕೆಲಸ ಮಾಡಿಸಲು ಮುಂದಾಗಲಿ. ಉಳಿದಿರುವ ಎರಡು ವರ್ಷಗಳ ಅವಧಿಯಲ್ಲಿ ಸರಕಾರದಿಂದ ಜನರಿಗೆ ಒಳ್ಳೆಯದಾಗುವ ಉತ್ತಮ ಕೆಲಸಗಳನ್ನು ಮಾಡಿಸಲು ಸೂಕ್ತ ಸಲಹೆ, ಸೂಚನೆಗಳನ್ನು ನೀಡಲಿ. ವೃಥಾ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗುವುದು ಸರಿಯಲ್ಲ ಎಂದರು.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಭಾಗದಲ್ಲೂ ಜನರಿಗೆ ನೆರವಾಗುವ ಕೆಲಸ ಮಾಡುತ್ತಿಲ್ಲ. ತಹಶೀಲ್ದಾರ್‌ಗಳು ಸಹ ಕೆಲಸ ಮಾಡುತ್ತಿಲ್ಲ. ಸರಕಾರ ಉಡಾಫೆ, ಅಹಂಕಾರ, ನಿರಾಸಕ್ತಿಯಿಂದ ವರ್ತಿಸುತ್ತಿದೆ ಎಂದು ಸುರೇಶ್ ಕುಮಾರ್ ಆಪಾದಿಸಿದರು.
ಮೇಲ್ಮನೆ ಸದಸ್ಯ ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ವಸ್ತುಸ್ಥಿತಿ ಅಧ್ಯಯನ ನಡೆಸಲು 12 ತಂಡಗಳನ್ನು ರಚಿಸಲಾಗಿದೆ. 8 ತಂಡಗಳು ವಿವಿಧೆಡೆ ಪ್ರವಾಸ ಕೈಗೊಂಡಿದ್ದು, ಉಳಿದ ನಾಲ್ಕು ತಂಡಗಳು ಇದೇ 14 ರಿಂದ ವಿವಿಧೆಡೆ ಪ್ರವಾಸ ಕೈಗೊಂಡು ಪಕ್ಷ ಹಾಗೂ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.
ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ ಇದೀಗ ಜಾತಿ ಜನಗಣತಿ ವರದಿ ಕೂಡ ಸೋರಿಕೆಯಾಗಿದೆ. ಒಟ್ಟಾರೆ ಈ ಸರಕಾರ ಸೋರಿಕೆ ಸರಕಾರವಾಗಿದೆ. ಇದರಿಂದ ಜಾತಿ ಜನ ಗಣತಿ ವರದಿಯ ಘಟನೆಗೆ ಧಕ್ಕೆಯಾಗಿದೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಚಿವ ಎಚ್. ಆಂಜನೇಯ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಹೇಳಿದರು.







