ಮಂಗಳೂರು : ಮಹಾಪುರಷರ ಜಯಂತಿ- ಸ್ಮರಣೆಗೆ ನೀರಸ ಪ್ರತಿಕ್ರಿಯೆ: ಜಿಲ್ಲಾಧಿಕಾರಿ ವಿಷಾದ

ಮಂಗಳೂರು, ಎ. 12: ಬೀದಿ ಬದಿಯಲ್ಲಿ ಬಡಿದಾಟಕ್ಕೆ ಒಗ್ಗಟ್ಟಾಗುವ ಜನ, ಮಹಾಪುರಷರ ಜಯಂತಿ, ಸ್ಮರಣೆಯ ಕಾರ್ಯಕ್ರಮಗಳಿಗೆ ನೀರಸ ಪ್ರತಿಕ್ರಿಯೆ ತೋರುತ್ತಿರುವುದು ಬೇಸರದ ಸಂಗತಿ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ವಿಷಾದಿಸಿದ್ದಾರೆ.
ಅವರ ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ನಗರದ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಸಾರ್ವಜನಿಕರ ನೀರಸ ಪ್ರತಿಕ್ರಿಯೆ ಬಗ್ಗೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಡನ್ನು ಕಟ್ಟಿದವರು ಮತುತಿ ಬೌದ್ಧಿಕ ಶ್ರೀಮಂತಿಕೆಯನ್ನು ರೂಪಿಸಿದ ಮಹಾನ್ ನಾಯಕರಿಗೂ ನಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಇಲ್ಲಿನ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಸಾವಿರಾರು ರೂಪಾಯಿ ವೆಚ್ಚಮಾಡಿ ನಡೆಸುವ ಇಂತಹ ಕಾರ್ಯಕ್ರಮಗಳಿಗೆ ಜನರೇ ಬರುವುದಿಲ್ಲ ಎಂದಾದರೆ ಜಿಲ್ಲೆಯಲ್ಲಿ ಸರ್ಕಾರದಿಂದ ಮಹಾಪುರಷರ ಜಯಂತಿ ಆಚರಿಸುವುದನ್ನು ಮುಂದುವರಿಸುವ ಬಗ್ಗೆ ಮರುಚಿಂತನೆ ಮಾಡಬೇಕಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಸಾತ್ಮಕ ಚಟುವಟಿಕೆಗಳು ಮಾತ್ರ ನಡೆಯುತ್ತಿವೆ ಎಂಬ ತಪ್ಪು ಸಂದೇಶ ಹೊರ ಜಗತ್ತಿಗೆ ರವಾನೆ ಆಗುತ್ತಿದೆ. ಇದರಿಂದಾಗಿ ಜಿಲ್ಲೆಯ ಕೈಗಾರಿಕೆ, ಪ್ರವಾಸೋದ್ಯಮ ಎಲ್ಲವೂ ಪ್ರತಿಕೂಲ ಪರಿಣಾಮಗಳನ್ನು ಎದುರಿಸುತ್ತಿವೆ ಎಂದವರು ಹೇಳಿದರು.
ಮೂವರು ಸಚಿವರು, ನಾಲ್ವರು ಶಾಸಕರು, ವಿಧಾನ ಪರಿಷತ್ತಿನ ಇಬ್ಬರು ಸದಸ್ಯರು, ಸಂಸದ ನಳಿನ್‌ಕುಮಾರ್ ಕಟೀಲ್, ಮೇಯರ್ ಕೆ.ಹರಿನಾಥ್ ಸೇರಿದಂತೆ ಹಲವು ಮಂದಿ ಅತಿಥಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಆದರೆ ಉದ್ಘಾಟನಾ ಸಮಾರಂಭದ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಸೇರಿದಂತೆ ಕೆಲವರೇ ಹಾಜರಿದ್ದರು. ಕಾರ್ಯಕ್ರಮ ಉದ್ಘಾಟನೆಯ ನಿಗದಿತ ಸಮಯದ ವೇಳೆ ಸುಮಾರು 20 ಮಂದಿಯಷ್ಟೂ ಜನ ಪುರಭವನದಲ್ಲಿರಲಿಲ್ಲ. ಹೀಗಾಗಿ ಕಾರ್ಯಕ್ರಮ ಕೆಲ ಹೊತ್ತು ತಡವಾಗಿ ಆರಂಭಗೊಂಡಿತು. ಈ ಸಂದರ್ಭ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಕೆ.ಅಭಯಚಂದ್ರ ಜೈನ್ ಅವರು ಸಮಾರಂಭಕ್ಕೆ ಭೇಟಿ ನೀಡಿದರು.
ಎಲ್ಲಾ ಸಮಾರಂಭಗಳನ್ನೂ ಪುರಭವನದಲ್ಲೇ ನಡೆಸಬೇಕೆಂಬ ಹಠ ಬೇಡ. ಅಂತಹ ಹಠಕ್ಕೆ ಬಿದ್ದರೆ ಇಲ್ಲಿಗೆ ಜನರೇ ಬರುವುದಿಲ್ಲ. ಜನರು ಇರುವಲ್ಲಿಗೆ ಹೋಗಿ ಸಮಾರಂಭಗಳನ್ನು ನಡೆಸಬೇಕು ಎಂದು ಶಾಸಕ ಐವನ್ ಡಿಸೋಜ ಅಭಿಪ್ರಾಯಿಸಿದರು.
ಕೋಡಿಜಾಲ್ ಇಬ್ರಾಹಿಂ ಮಾತನಾಡಿ, ದೇವರ ದಾಸಿಮಯ್ಯನಂತಹ ವ್ಯಕ್ತಿಗಳ ತತ್ವ, ಸಂದೇಶಗಳನ್ನು ಅನುಸರಿಸುವ ಮೂಲಕ ಸೌಹಾರ್ದ ಬದುಕನ್ನು ಕಟ್ಟಬೇಕಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಮಾತನಾಡಿದರು. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ., ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮಹಮ್ಮದ್ ಹನೀಫ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಚಂದ್ರಹಾಸ ರೈ, ಕರಾವಳಿ ದೇವಾಂಗ ಸಂಘದ ಮುಖಂಡರಾದ ರಾಮು ಮಾಯಿಪ್ಪಾಡಿ, ವಿ.ಎ.ರಾಮದಾಸ್, ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ಪುರಂದರ ಡಿ. ಶೆಟ್ಟಿಗಾರ್ ಉಪಸ್ಥಿತರಿದ್ದರು.







