ಅರ್ಹ ಸೌದಿಗಳು ಲಭ್ಯವಿದ್ದರೆ ವಲಸಿಗರಿಗೆ ಉದ್ಯೋಗ ಇಲ್ಲ!
ಸೌದಿ ಸಂಕಟ

ರಿಯಾದ್, ಎ. 12: ಖಾಸಗಿ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಗಳಿಗೆ ಅರ್ಹರಾಗಿರುವ ಸೌದಿ ಅರೇಬಿಯದ ನಾಗರಿಕರು ಸಿಗದಿದ್ದರೆ ಮಾತ್ರ ವಿದೇಶೀಯರನ್ನು ನೇಮಿಸಲು ಅವಕಾಶ ನೀಡಲಾಗುವುದು ಎಂದು ಮಾನವ ಸಂಪನ್ಮೂಲಗಳ ಅಭಿವೃದ್ಧಿ ನಿಧಿ ಹೇಳಿದೆ.
ನೇಮಕಾತಿಯಲ್ಲಿ ಸೌದಿ ರಾಷ್ಟ್ರೀಯರಿಗೆ ಆದ್ಯತೆ ನೀಡುವುದಕ್ಕಾಗಿ ನೇಮಕಾತಿ ಪ್ರಕ್ರಿಯೆಯನ್ನು ಕಾರ್ಮಿಕ ಸಚಿವಾಲಯದ ಇಲೆಕ್ಟ್ರಾನಿಕ್ ನ್ಯಾಶನಲ್ ಗೇಟ್ ಫಾರ್ ಜಾಬ್ಸ್‌ಗೆ ಹಸ್ತಾಂತರಿಸಲಾಗುವುದು ಎಂದು ಸೌದಿ ಗಝೆಟ್ ಹೇಳಿದೆ.
ವಿದೇಶೀಯರ ನೇಮಕಾತಿಯನ್ನು ಕೈಗೆತ್ತಿಗೊಳ್ಳುವ ಮುನ್ನ ಉದ್ಯೋಗಗಳ ರಾಷ್ಟ್ರೀಕರಣಕ್ಕೆ ಅವಕಾಶ ನೀಡುವ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಹಾಗೂ ಅದನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ನಿಧಿಯ ಉಪ ಕಾರ್ಯಕಾರಿ ಅಧ್ಯಕ್ಷ ಉಮರ್ ಮಿಲಿಬಾರಿ ತಿಳಿಸಿದರು.
ನಿರ್ದಿಷ್ಟ ಸಮಯ ಮಿತಿಯಲ್ಲಿ ಅರ್ಹ ಸೌದಿ ರಾಷ್ಟ್ರೀಯರನ್ನು ನೇಮಿಸಲು ಉದ್ಯೋಗದಾತರಿಗೆ ಸಾಧ್ಯವಾಗದಿದ್ದರೆ, ವಿದೇಶೀಯರ ನೇಮಕಾತಿಗೆ ಅನುಮತಿ ಕೋರಿ ಅವರು ಸಲ್ಲಿಸುವ ಅರ್ಜಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು.





