ಶಿರಾಡಿ ದರೋಡೆಗೆ ಯತ್ನಿಸಿ ಪಾರಾರಿಯಾಗುತ್ತಿದ್ದ ವೇಳೆ ಸ್ಕಾರ್ಪಿಯೋ ಡಿಕ್ಕಿ : ಪಾದಾಚಾರಿ ಆಸ್ಪತ್ರೆಗೆ ದಾಖಲು

ಪುತ್ತೂರು : ಶಿರಾಡಿ ಘಾಟ್‌ನಲ್ಲಿ ಪ್ರಯಾಣಿಕರ ವಾಹನವೊಂದನ್ನು ಅಡ್ಡಗಟ್ಟಿ ನಗದು ಹಾಗೂ ಚಿನ್ನಾಭರಣ ದರೋಡೆಗೈದ ಐವರು ದರೋಡೆಕೋರರ ತಂಡವೊಂದು ಸ್ಕಾರ್ಪಿಯೋ ವಾಹನದಲ್ಲಿ ಪರಾರಿಯಾಗಲೆತ್ನಿಸಿದ ವೇಳೆ ಪಾದಾಚಾರಿಯೋರ್ವರಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದಿರುವ ಘಟನೆ ಎ.11 ರಂದು ತಡರಾತ್ರಿ ನಡೆದಿದೆ.
ಪಂಜ ಕೇನ್ಯ ನಿವಾಸಿ ಎಲ್ಯಣ್ಣ ಗೌಡರ ಪುತ್ರ ಮಹೇಶ್ ಯಾನೆ ಉಮೇಶ್ (28) ಗಾಯಗೊಂಡವರಾಗಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ಧಾರಿ 75ರ ಸಕಲೇಶಪುರ ಸಮೀಪ ಶಿರಾಡಿ ಘಾಟ್‌ನಲ್ಲಿ ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟವೇರಾವೊಂದನ್ನು ಅಡ್ಡಗಟ್ಟಿದ ಸ್ಕಾರ್ಪಿಯೋ ವಾಹನವೊಂದರಲ್ಲಿ ಬಂದ ಐವರು ದರೋಡೆಕೋರರ ತಂಡ ಟವೇರಾದಲ್ಲಿದ್ದ ಪ್ರಯಾಣಿಕರ ಕಣ್ಣಿಗೆ ಮೆಣಸಿನ ಹುಡಿ ಎರಚಿ ಅವರಲ್ಲಿದ್ದ ನಗದು ಹಾಗೂ ಚಿನ್ನಾಭರಣ ಲೂಟಿಗೈದು ನೆಲ್ಯಾಡಿ ಕಡೆಗೆ ಪರಾರಿಯಾಗಿದೆ. ಈ ಬಗ್ಗೆ ತಕ್ಷಣ ಗುಂಡ್ಯ ಗೇಟ್‌ಗೆ ಮಾಹಿತಿ ನೀಡಲಾಗಿತ್ತು. ಆರೋಪಿಗಳಿದ್ದ ಸ್ಕಾರ್ಪಿಯೋದ ಪತ್ತೆಗೆ ನಾಕಾಬಂಧಿ ನಡೆಯಿತು. ಸ್ಕಾರ್ಪಿಯೋ ಗುಂಡ್ಯ ಸಮೀಪಿಸುತ್ತಿದ್ದಂತೆ ಫಾರೆಸ್ಟ್ ಗೇಟ್‌ನಲ್ಲಿ ನಿಲ್ಲಿಸಲು ಸೂಚನೆ ನೀಡಲಾಗಿತ್ತು. ಇದರ ಮಾಹಿತಿ ಅರಿತ ಸ್ಕಾರ್ಪಿಯೋ ಚಾಲಕ ಸ್ಕಾರ್ಪಿಯೋವನ್ನು ದಿಢೀರ್ ಮತ್ತೆ ಸಕಲೇಶಪುರ ಕಡೆಗೆ ತಿರುಗಿಸಿ ಅಡ್ಡಾದಿಡ್ಡಿಯಾಗಿ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಮಹೇಶ್ ರವರಿಗೆ ಡಿಕ್ಕಿ ಹೊಡೆದಿದೆ.





