ಪುಣೆ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸಿ: ಬಿಸಿಸಿಐಗೆ ಹೈಕೋರ್ಟ್ ಆದೇಶ

ಮುಂಬೈ, ಎ.12: ಪುಣೆಯಲ್ಲಿ ನಡೆಯಲಿರುವ ಕೆಲವು ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಬಾಂಬೆ ಹೈಕೋರ್ಟ್ ಬಿಸಿಸಿಐಗೆ ಮಂಗಳವಾರ ಆದೇಶ ನೀಡಿದೆ.
ಕ್ರಿಕೆಟ್ ಪಿಚ್‌ಗಳ ನಿರ್ವಹಣೆಗೆ ಲಕ್ಷಗಟ್ಟಲೆ ಲೀಟರ್ ನೀರನ್ನು ವ್ಯರ್ಥಗೊಳಿಸುತ್ತಿರುವುದನ್ನು ಪ್ರಶ್ನಿಸಿ ಎನ್‌ಜಿಒ ಲೋಕಸತ್ತಾ ಮೂವ್‌ಮೆಂಟ್ ಹಾಗೂ ಫೌಂಡೇಶನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದುವರಿಸಿದ ಜಸ್ಟಿಸ್ ವಿ.ಎಂ. ಕಾನಡೆ ಹಾಗೂ ಜಸ್ಟಿಸ್ ಎಂಎಸ್ ಕಾರ್ನಿಕಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಬರಪೀಡಿತ ಮಹಾರಾಷ್ಟ್ರದಲ್ಲಿ ಒಟ್ಟು 20 ಐಪಿಎಲ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಈ ಪೈಕಿ ಪುಣೆಯಲ್ಲಿ 9 ಪಂದ್ಯಗಳು ನಡೆಯುತ್ತವೆ. ಮುಂಬೈನಲ್ಲಿ 8 ಹಾಗೂ ನಾಗ್ಪುರದಲ್ಲಿ 3 ಪಂದ್ಯಗಳು ನಡೆಯುತ್ತವೆ.
ಮುಂಬೈ ಹಾಗೂ ಪುಣೆಯಲ್ಲಿ ನಡೆಯಲಿರುವ 17 ಪಂದ್ಯಗಳ ಪಿಚ್‌ಗಳ ನಿರ್ವಹಣೆಗೆ ಚರಂಡಿ ನೀರನ್ನು ಬಳಸಲಾಗುತ್ತಿದೆ. ಮಹಾಲಕ್ಷ್ಮೀ ರೇಸ್‌ಕೋರ್ಸ್‌ನಿಂದ ಚರಂಡಿ ನೀರನ್ನು ಒದಗಿಸುವಂತೆ ರಾಯಲ್ ವೆಸ್ಟರ್ನ್ ಇಂಡಿಯಾ ಟರ್ಫ್ ಕ್ಲಬ್‌ಗೆ ಕೋರಿಕೆ ಸಲ್ಲಿಸಿದ್ದೇವೆ. ಇದೀಗ ಟರ್ಫ್ ಕ್ಲಬ್ ದಿನಕ್ಕೆ 7-8 ಟ್ಯಾಂಕರ್ ಚರಂಡಿ ನೀರು ಒದಗಿಸುತ್ತಿದೆ. ನಾವು ಟ್ಯಾಂಕರ್ ನೀರನ್ನು ಬಳಸುತ್ತಿಲ್ಲ ಎಂದು ಬಿಸಿಸಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ರಫೀಖ್ ದಾದಾ ಕೋರ್ಟಿಗೆ ಮಾಹಿತಿ ನೀಡಿದರು.







