ಕಡಬ: ಎಪ್ರಿಲ್ 14 ರಂದು ಬಂಟ್ರ ಸರಕಾರಿ ಶಾಲೆಯ ವಾರ್ಷಿಕೋತ್ಸವ, ದ್ವಾರ ಉದ್ಘಾಟನೆ
ಕಡಬ, ಎ.12. ಪುತ್ತೂರು ತಾಲೂಕಿನ ಬಂಟ್ರ ಮರ್ಧಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ನೂತನವಾಗಿ ನಿರ್ಮಾಣ ಮಾಡಿರುವ ಶಾಲಾ ದ್ವಾರದ ಉದ್ಘಾಟನಾ ಕಾರ್ಯಕ್ರಮವು ಎಪ್ರಿಲ್ 14 ನೇ ಗುರುವಾರ ನಡೆಯಲಿದೆ ಎಂದು ಶಾಲಾ ಸಹಶಿಕ್ಷಕ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ತಿಳಿಸಿದರು.
ಅವರು ಸೋಮವಾರ ಮರ್ಧಾಳದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಎಪ್ರಿಲ್ 14 ರಂದು ನಡೆಯುವ ಅಂಬೇಡ್ಕರ್ ಜಯಂತಿ ಹಾಗೂ ವಾರ್ಷಿಕೋತ್ಸವ ಪ್ರಯುಕ್ತ ಪೂರ್ವಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮರ್ಧಾಳ ಗ್ರಾ.ಪಂ ಅಧ್ಯಕ್ಷೆ ಲಲಿತಾ ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗಿರಿಧರ ಸ್ಕಂದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪುತ್ತೂರು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.
ಕಡಬ ವಲಯ ಶಿಕ್ಷಣ ಸಂಯೋಜಕ ಉದಯಶಂಕರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಿದ್ದಾರೆ. ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಮಾಮಚ್ಚನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರದೀಪ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಕೊಲಂತ್ತಾಡಿ, ಬಂಟ್ರ ಸಮೂಹ ಸಂಪನ್ಮೂಲ ವ್ಯಕ್ತಿ ಪೊಡಿಯಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟಗಳ ಕಡಬ ವಲಯಾಧ್ಯಕ್ಷ ಗಣಪಯ್ಯ ಗೌಡ ಪಂಜೋಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶತಾಯುಷಿ ಹೊನ್ನಯ್ಯ ಗೌಡ ವೇದಿಕೆಯಲ್ಲಿ ಸಂಜೆ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಸುಳ್ಯ ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ದೀಪ ಪ್ರಜ್ವಲನ ಮಾಡಿಲಿದ್ದಾರೆ. ಕೈಕುರೆ ಬಾಬು ಗೌಡ ಸ್ಮರಣಾರ್ಥ ಅವರ ಮಕ್ಕಳಾದ ಶಿವಪ್ರಸಾದ್ ಹಾಗೂ ಗಣೇಶ್ ಕೈಕುರೆ ಅವರು ಕೊಡುಗೆಯಾಗಿ ನೀಡಿದ ಶಾಲಾ ನೂತನ ದ್ವಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಉದ್ಘಾಟಿಸಲಿದ್ದಾರೆ. ದಾನಿಗಳನ್ನು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್ ಸನ್ಮಾನಿಸಲಿದ್ದು, ತಾಲೂಕು ಪಂಚಾಯತ್ ಸದಸ್ಯೆ ಪಿ.ವೈ.ಕುಸುಮಾ ಬಹುಮಾನ ವಿತರಿಸಲಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಲ್ಟರ್ ಡಿಮೆಲ್ಲೋ ವರ್ಲಿ ಚಿತ್ರ ಉದ್ಗಾಟಿಸಲಿದ್ದಾರೆ. ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ವೈ.ಶಿವರಾಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್, ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೆಶಕ ರೊಭಾಸ್ಕರ್ ರಾವ್, ಕ.ರಾ.ಪ್ರಾ.ಶಾ,ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ್ ಭಟ್, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ದಿವ್ಯಾ ಬಾಲಕೃಷ್ಣ, ಮರ್ಧಾಳ ಮಹಿಳಾ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶಾರದಾ ಜಯಕುಮಾರ್, ಕಡಬ ಪ್ರಾ,ಕೃ,ಪ.ಸಹಕಾರಿ ಸಂಘದ ನಿರ್ದೆಶಕ ಪೂವಪ್ಪ ಗೌಡ ಅತಿಥಿಗಳಾಗಿ ಭಾಗವಹಿಲಿದ್ದಾರೆ. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ ರಾಮಕೃಷ್ಣ ಮಲ್ಲಾರ ಶಾಲೆಯು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಕಾರ್ಯಾಚರಿಸುತ್ತಿದೆ. ವಿವಿಧ ದಾನಿಗಳ ಸಹಾಯ ಹಸ್ತದಿಂದಾಗಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮಾಡಿಕೊಳ್ಳಲಾಗಿದೆ, ಇದರಿಂದಾಗಿ ಶಾಲೆ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್ ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಕೊಲಂತ್ತಾಡಿ, ಮುಖ್ಯಗುರು ದೇವಕಿ ಮೊದಲಾದವರು ಉಪಸ್ಥಿತರಿದ್ದರು.





