ಮಂಗಳೂರು : ಮುಹಮ್ಮದ್ ಹಫೀಝ್ ಸ್ವಲಾಹಿ ಅವರಿಗೆ ಡಾಕ್ಟರೇಟ್

ಮಂಗಳೂರು,ಎ.12: ಅಲೀಘಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಮುಹಮ್ಮದ್ ಹಫೀಝ್ ಸ್ವಲಾಹಿಯವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಸಲ್ಲಿಸಿದ ‘ಎಜುಕೇಶನಲ್ ಡೆವಲಪ್‌ಮೆಂಟ್ ಆಫ್ ಮುಸ್ಲಿಮ್ಸ್ ಇನ್ ಕರ್ನಾಟಕ ’ (ಕರ್ನಾಟಕದ ಮುಸ್ಲಿಮರ ಶೈಕ್ಷಣಿಕ ಪ್ರಗತಿ) ಎಂಬ ಸಂಶೋಧನಾತ್ಮಕ ಮಹಾಪ್ರಬಂಧಕ್ಕೆ ವಿಶ್ವ ಪ್ರಸಿದ್ದ ಅಲೀಘಡ ಮುಸ್ಲಿಮ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
ಖ್ಯಾತ ಇತಿಹಾಸಕಾರ ಹಾಗೂ ಅಲೀಘಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ಇಸ್ಲಾಮಿ ಅಧ್ಯಯನ ವಿಭಾಗದ ನಿರ್ದೇಶಕರಾದ ಪ್ರೊ. ಝಫರುಲ್ ಇಸ್ಲಾಮ್ ಇವರ ಮಾರ್ಗದರ್ಶನದಲ್ಲಿ ಹಫೀಝ್ ಸ್ವಲಾಹಿ ಈ ಸಂಶೋಧನೆಯನ್ನು ಕೈಗೊಂಡಿದ್ದರು.
ಇವರು ಪ್ರಾಥಮಿಕ ಶಿಕ್ಷಣವನ್ನು ಕಲ್ಲಾಪು-ಪಟ್ಲ ಸರಕಾರಿ ಉರ್ದು ಶಾಲೆ, ಪ್ರೌಢ ಶಿಕ್ಷಣವನ್ನು ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಪ್ರೌಢಶಾಲೆ , ಪದವಿವರೆಗೆ ಕೇರಳದ ಜಾಮಿಯ ನದವಿಯ್ಯ(ಕೋಝಿಕೋಡ್ ವಿಶ್ವವಿದ್ಯಾನಿಲಯ) ಮತ್ತು ಸ್ನಾತಕೋತ್ತರ ಪದವಿಯನ್ನು ದಿಲ್ಲಿಯ ಹಂದರ್ದ್ ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ.
ತೊಕ್ಕೊಟ್ಟು ಸಮೀಪದ ಕಲ್ಲಾಪು-ಪಟ್ಲ ನಿವಾಸಿಯಾದ ದಿ.ಉಮರಬ್ಬ ಯು.ಪಿ ಮತ್ತು ಝೈನಬ ದಂಪತಿಯ ತೃತೀಯ ಪುತ್ರರಾಗಿರುವ ಇವರು ಕರ್ನಾಟಕ ಸಲಫೀ ಅಸೋಸಿಯೇಶನ್ (ರಿ) ಮಂಗಳೂರು ಇದರ ಸಲಹಾ ಮಸಿತಿ ಸದಸ್ಯರಾಗಿರುತ್ತಾರೆ ಮತ್ತು ಪ್ರಸ್ತುತ ಮಂಗಳೂರಿನ ಹುದಾ ಇಸ್ಲಾಮಿಕ್ ಸ್ಕೂಲ್‌ನಲ್ಲಿ ಇಸ್ಲಾಮಿ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.







