ಮಣಿಪುರ:ಗುಂಪಿನಿಂದ ಇಬ್ಬರು ಯುವಕರ ಹತ್ಯೆ
ಕೋಮು ಘಟನೆಯೆಂಬ ಶಂಕೆ, ಮುಖ್ಯಮಂತ್ರಿ ಮೌನ

ಇಂಫಾಲ,ಎ.12: ಮಯಾಂಗ್ ಇಂಫಾಲದ ಯಾಂಗ್ಬಿ ಗಾರ್ಡನ್‌ನಲ್ಲಿ ಗುಂಪಿನಿಂದ ಬರ್ಬರವಾಗಿ ಥಳಿಸಲ್ಪಟ್ಟ ಮೂವರು ಮಣಿಪುರಿ ಮುಸ್ಲಿಮ್ ಯುವಕರ ಪೈಕಿ ಇಬ್ಬರು ಸಾವನ್ನಪ್ಪಿದ್ದು,ಇನ್ನೋರ್ವ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾನೆ. ಕಳೆದ ಗುರುವಾರ ಸಂಜೆ ಈ ಘಟನೆ ನಡೆದಿದ್ದು,ಈ ಬಗ್ಗೆ ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಒಕ್ರಂ ಇಬೋಬಿ ಸಿಂಗ್ ಈವರೆಗೂ ತುಟಿಪಿಟಕ್ಕೆಂದಿಲ್ಲ.
ಮೂವರೂ ವಿದ್ಯಾರ್ಥಿಗಳಾಗಿದ್ದು,ಅವರು ಗಾರ್ಡನ್‌ನಿಂದ ಹೊರಕ್ಕೆ ಬರುತ್ತಿದ್ದಂತೆ ದಾಳಿಕೋರರ ಗುಂಪು ಅವರನ್ನು ನಿರ್ದಯವಾಗಿ ಥಳಿಸಿದೆ. ಗುಂಪಿನ ಕ್ರೌರ್ಯಕ್ಕೆ ಮೊಹಮ್ಮದ್ ಸದಾಮ್(23) ಮತ್ತು ಮೊಹಮ್ಮದ್ ಫಾರೂಕಿ(22) ಪ್ರಾಣಗಳನ್ನು ಕಳೆದುಕೊಂಡರೆ, ಮೊಹಮ್ಮದ್ ಜಾಬಿರ್(19) ತೀವ್ರವಾಗಿ ಗಾಯಗೊಂಡಿದ್ದ. ಮಾ.25ರಂದು ಇರಾಮ್ ಸಿಫಾಯಿಯಲ್ಲಿ ಆರು ಮುಸ್ಲಿಂ ಯುವಕರನ್ನು ಕ್ರೂರವಾಗಿ ಥಳಿಸಲಾಗಿತ್ತು. ಈ ವಿಷಯ ಹೆಚ್ಚಿನ ಮಾಧ್ಯಮಗಳಲ್ಲಿ ಪ್ರಕಟವೇ ಆಗಿರಲಿಲ್ಲ.
ಪ್ರಸ್ತುತ ಪ್ರಕರಣದಲ್ಲಿ ಈ ಹುಡುಗರು ಕೋಮು ದಾಳಿಯ ಗುರಿಗಳಾಗಿದ್ದರೇ ಅಥವಾ ತಮ್ಮ ಪಂಗಾಲ ಸಮುದಾಯಕ್ಕೆ ಅಂಟಿರುವ ಅಪರಾಧಿಗಳೆಂಬ ಕಳಂಕಕ್ಕೆ ಬೆಲೆ ತೆತ್ತಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಗುಂಪು ಈ ಯುವಕರನ್ನು ಬೈಕ್ ಕಳ್ಳರೆಂದು ಆರೋಪಿಸಿ ಹಲ್ಲೆ ನಡೆಸಿತ್ತು ಎಂದು ವರದಿಗಳು ಹೇಳಿವೆ. ಈ ಘಟನೆಗೂ ಕೋಮುವಾದ ಅಥವಾ ಗೋಮಾಂಸ ಭಕ್ಷಣೆಗೂ ಸಂಬಂಧವಿಲ್ಲ ಅಥವಾ ಇದ್ದರೂ ಅಲ್ಪವೇ ಸಂಬಂಧವಿದ್ದಿರಬಹುದು. ಬೈಕ್ ಕಳ್ಳರು ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರೆ ಆಗಲೂ ಹೀಗೆಯೇ ಅವರನ್ನು ಥಳಿಸಲಾಗುತ್ತಿತ್ತೇ ಎನ್ನುವುದು ನನಗೆ ಖಚಿತವಿಲ್ಲ, ಹೀಗಾಗಿ ನನ್ನ ಹೇಳಿಕೆಯಲ್ಲಿ ‘ಅಲ್ಪ’ ಶಬ್ದವನ್ನು ಬಳಸಿದ್ದೇನೆ. ಪಂಗಾಲ ಸಮುದಾಯದವರನ್ನು ಅಪರಾಧಿಗಳೆಂದು ನೋಡುವುದು ನಿಲ್ಲಬೇಕು. ಆದರೆ ಇದೇ ವೇಳೆ ಇನ್ನೊಂದು ಗುಂಪು ತನ್ನ ಸೋದರ ಸಂಬಂಧಿಯನ್ನು ಹತ್ಯೆ ಮಾಡಿದ್ದ ಆರೋಪಿಯ ಮನೆಯನ್ನು ಧ್ವಂಸಗೊಳಿಸಿದೆ. ಇಲ್ಲಿ ಆರೋಪಿ ಬೇರೊಂದು ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಮಣಿಪುರ ಈಗಲೂ ಹಲವಾರು ವಿಷಯಗಳಲ್ಲಿ ಅನಾಗರಿಕವಾಗಿಯೇ ಉಳಿದಿದೆ ಎಂದು ಫ್ರೀ ಪ್ರೆಸ್‌ನ ಸಂಪಾದಕ ಪ್ರದೀಪ ಫಾಂಜೌಬಮ್ ಹೇಳಿದರು.
ಆದರೆ ಈ ಘಟನೆಯ ಬಗ್ಗೆ ಎರಡು ಅಭಿಪ್ರಾಯಗಳು ಕೇಳಿ ಬರುತ್ತಿವೆ. ಒಂದು ಗುಂಪು ಇದು ಕೋಮು ದಾಳಿ ಎಂದು ಹೇಳಿದರೆ,ಆ ಸಾಧ್ಯತೆಯಿಲ್ಲ ಎಂದು ಇನ್ನೊಂದು ಗುಂಪು ಹೇಳುತ್ತಿದೆ. ತನ್ಮಧ್ಯೆ ಘಟನೆಯ ಕುರಿತಂತೆ ಸರಕಾರವು ನಿಷ್ಕ್ರಿಯವಾಗಿರುವುದನ್ನು ಮಾಧ್ಯಮಗಳು ಪ್ರಶ್ನಿಸಿವೆ.







