ಹೆಚ್ಚುತ್ತಿರುವ ಬೊಕೊ ಹರಂ ಬಾಲ ಆತ್ಮಹತ್ಯಾ ಬಾಂಬರ್‌ಗಳು

ಲಿಬ್ರವಿಲ್ (ಗ್ಯಾಬನ್), ಎ. 12: ನೈಜೀರಿಯದ ಬೊಕೊ ಹರಂ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಲು ಮಕ್ಕಳನ್ನು ಬಳಸುತ್ತಿರುವ ಪ್ರಮಾಣ 10 ಪಟ್ಟಿನಷ್ಟು ಏರಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.
ಬಹುರಾಷ್ಟ್ರೀಯ ಸೇನಾ ಕಾರ್ಯಾಚರಣೆಯಿಂದ ದುರ್ಬಲಗೊಂಡಿರುವ ಭಯೋತ್ಪಾದಕ ಗುಂಪು, ಈಗ ಜನಸಂದಣಿಯ ಮಾರುಕಟ್ಟೆಗಳು, ಮಸೀದಿಗಳು ಹಾಗೂ ಬೊಕೊ ಹರಂ ಹಿಂಸೆಗೆ ಹೆದರಿ ಪರಾರಿಯಾಗಿರುವ ಜನರು ವಾಸಿಸುತ್ತಿರುವ ಶಿಬಿರಗಳ ಮೇಲೆ ಆತ್ಮಹತ್ಯಾ ದಾಳಿಗಳನ್ನು ನಡೆಸಲು ಮಕ್ಕಳನ್ನು ಬಳಸುವ ಮೂಲಕ ಭಯೋತ್ಪಾದನೆಯನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ವಿಶ್ವಸಂಸ್ಥೆಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಇದು ಮಕ್ಕಳಿಗೆ, ಅದರಲ್ಲೂ ಮುಖ್ಯವಾಗಿ ಬೊಕೊ ಹರಂನ ಬಂಧನ ಮತ್ತು ಲೈಂಗಿಕ ದಾಳಿಯಿಂದ ನಲುಗಿ ಬದುಕುಳಿದ ಹೆಣ್ಣು ಮಕ್ಕಳಿಗೆ ಅಪಾಯಕಾರಿ ಪರಿಸ್ಥಿತಿಯನ್ನು ಒಡ್ಡಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯೂನಿಸೆಫ್‌ನ ವರದಿಯೊಂದು ತಿಳಿಸಿದೆ.
ನೈಜೀರಿಯ, ಕ್ಯಾಮರೂನ್, ಚಾಡ್ ಮತ್ತು ನೈಜರ್‌ಗಳಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟಗಳಲ್ಲಿ ಬಳಸಲ್ಪಟ್ಟ ಮಕ್ಕಳ ಸಂಖ್ಯೆ 2014ರಲ್ಲಿ ಇದ್ದ ನಾಲ್ಕರಿಂದ 2015ರಲ್ಲಿ 44ಕ್ಕೆ ಏರಿದೆ ಎಂದು ವರದಿ ಹೇಳಿದೆ.







