ಬೆದರಿಕೆ ಕರೆಗಳ ಕುರಿತು ಲಿಖಿತ ಮಾಹಿತಿ ನೀಡಿ: ಕಾಗೋಡು ತಿಮ್ಮಪ್ಪ
.jpg)
ಸಾಗರ, ಎ. 12: ಉಪವಿಭಾಗೀಯ ಆಸ್ಪತ್ರೆಗೆ ವರ್ಗವಾಗಿ ಬರುವ ವೈದ್ಯರಿಗೆ ಅಲ್ಲಿಗೆ ಕರ್ತವ್ಯಕ್ಕೆ ಹೋಗಬೇಡಿ. ಬೇರೆ ಕಡೆ ಸ್ಥಳ ನೋಡಿಕೊಳ್ಳಿ ಎಂದು ಬೆದರಿಕೆ ಕರೆಗಳು ಬರುತ್ತಿದೆ ಎನ್ನುವ ಕುರಿತು ಲಿಖಿತ ಮಾಹಿತಿ ನೀಡಿದರೆ ಅಂತಹ ಕರೆಗಳನ್ನು ಯಾರು ಮಾಡುತ್ತಿದ್ದಾರೆ, ಇದಕ್ಕೆ ಕಾರಣ ಏನು ಎನ್ನುವ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮಂಗಳವಾರ ನೂತನವಾಗಿ ಸೇವೆ ಆರಂಭಿಸಿರುವ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ವತಿಯಿಂದ ನೀಡಲಾಗಿರುವ ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪವಿಭಾಗೀಯ ಆಸ್ಪತ್ರೆಗೆ ಕಳೆದ ನಾಲ್ಕು ತಿಂಗಳ ಹಿಂದೆ ವರ್ಗವಾಗಿ ಬಂದಿರುವ ದಂತವೈದ್ಯರಿಗೆ ಇಲ್ಲಿಂದ ವರ್ಗಾವಣೆ ಮಾಡಿಸಿಕೊಳ್ಳುವಂತೆ ಒತ್ತಡ ಹಾಕಿರುವುದು ತನ್ನ ಗಮನಕ್ಕೆ ಬಂದಿದೆ ಎಂದರು.
ಕೆಲವು ತಿಂಗಳ ಹಿಂದೆ ಸರ್ಜನ್ ಆಗಿ ವರ್ಗಾವಣೆಯಾಗಿ ಬಂದ ವೈದ್ಯರೊಬ್ಬರಿಗೂ ಇದೇ ರೀತಿ ಬೆದರಿಕೆ ಕರೆ ಬಂದಿದೆ ಎನ್ನುವ ಮಾಹಿತಿ ಲಭ್ಯವಿದೆ. ಯಾರು ಈ ಕೆಲಸ ಮಾಡುತ್ತಿದ್ದಾರೆ, ಇದರ ಹಿಂದಿನ ಕೈ ಯಾರದ್ದು, ಎನ್ನುವ ಕುರಿತು ತನಿಖೆ ನಡೆಸಲಾಗುತ್ತದೆ. ಯಾವ ಸಂಖ್ಯೆಯಲ್ಲಿ ವೈದ್ಯರಿಬ್ಬರಿಗೆ ಕರೆ ಬಂದಿದೆ ಎನ್ನುವುದನ್ನು ಸಿವಿಲ್ ಸರ್ಜನ್ಗೆ ಕೊಡಿ, ಸ್ಥಳೀಯ ಪೊಲೀಸರಿಂದ ಈ ಕುರಿತು ತನಿಖೆ ನಡೆಸುವಂತೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.
ಉಪವಿಭಾಗೀಯ ಆಸ್ಪತ್ರೆಯಲ್ಲಿ ನಗುಮಗು ವಾಹನ ಸೇರಿದಂತೆ ಒಟ್ಟು ಮೂರು ಆ್ಯಂಬುಲೆನ್ಸ್ ಇದೆ. ಆ್ಯಂಬುಲೆನ್ಸ್‌ಗೆ ಚಾಲಕರ ಕೊರತೆ ಇದ್ದು, ಅದನ್ನು ಭರ್ತಿ ಮಾಡುವನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ ಎಂದ ಅವರು, ಗುತ್ತಿಗೆ ಕಾರ್ಮಿಕರಿಗೆ ಕೊಡಬೇಕಾದ ಸವಲತ್ತುಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಕಡ್ಡಾಯವಾಗಿ ನೀಡಬೇಕು. ಗುತ್ತಿಗೆ ಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿದೆಯೆ ಇಲ್ಲವೋ ಎನ್ನುವ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಾ ಇರಬೇಕು ಎಂದು ಸೂಚನೆ ನೀಡಿದರು. ಉಪವಿಭಾಗೀಯ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲು ಸುಮಾರು 5 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಗೊಳಿಸಲಾಗಿದೆ. ಇದಕ್ಕೆ ನಬಾರ್ಡ್‌ನಿಂದ ಒಪ್ಪಿಗೆ ಸಹ ಸಿಕ್ಕಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ. ಆಸ್ಪತ್ರೆಯ ಮೊದಲ ಅಂತಸ್ತು ನಿರ್ಮಾಣ, ವೈದ್ಯಸಿಬ್ಬಂದಿ ವಸತಿಗೃಹ ನಿರ್ಮಾಣ ಇನ್ನಿತರ ಕೆಲಸಗಳು ನಿರ್ವಹಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನ.ಶ್ರೀನಿವಾಸ್, ಸಿವಿಲ್ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ.ರಮೇಶ್ ಇನ್ನಿತರರು ಉಪಸ್ಥಿತದ್ದರು.







