ದಾಸಿಮಯ್ಯನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಚಂದ್ರೇಗೌಡ

ಚಿಕ್ಕಮಗಳೂರು, ಎ.12: ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜಯಂತಿಗಳ ಆಚರಣೆ ಸಾರ್ಥಕವಾಗುತ್ತದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಎಸ್.ಚಂದ್ರೇಗೌಡ ತಿಳಿಸಿದರು.
ಅವರು ಮಂಗಳವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ನವರ 1037 ನೆ ಜಯಂತಿ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದ ಒಳಿತಿಗೆ ದುಡಿದ ದಾರ್ಶನಿಕರು, ಸಂತರ ಜಯಂತಿಯನ್ನು ಕೇವಲ ನೆಪಮಾತ್ರಕ್ಕೆ ಮಾಡಿದರೆ ಸಾಲದು ಅವರ ಮಾರ್ಗದರ್ಶನಗಳನ್ನು ನಾವು ಜೀವನದಲ್ಲಿ ರೂಡಿಸಿಕೊಂಡಲ್ಲಿ ದಾರ್ಶನಿಕರ ಜಯಂತಿಗಳ ಆಚರಣೆಗೆ ಅರ್ಥ ಬರುತ್ತದೆ ಎಂದರು.
ಅಖಿಲ ಕರ್ನಾಟಕ ವಚನ ಸಾಹಿತ್ಯ ಪ್ರಚಾರ ಪರಿಷತ್‌ನ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಉಪನ್ಯಾಸ ನೀಡಿ ಮಾತನಾಡಿ 12 ನೇ ಶತಮಾನದ ಪೂರ್ವದಲ್ಲಿ ವಚನ ಸಾಹಿತ್ಯ ರಚಿಸಿದ ದೇವರದಾಸಿಮಯ್ಯ ರವರು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ವಚನಗಳು ಎಂಬ ಪುಸ್ತಕ ಮತ್ತು ಸಿ.ಡಿ ಯನ್ನು ಬಿಡುಗಡೆ ಮಾಡಿ ಮಾತನಾಡಿದರು. ನಗರಸಭಾ ಅಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭೆೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ಜಿಲ್ಲಾ ನೇಕಾರ ಸಂಘದ ಅಧ್ಯಕ್ಷ ಹೆಚ್.ಎಲ್.ಶೇಖರಪ್ಪ, ಜಿಲ್ಲಾ ಕುರುಹಿನಶೇಟ್ಟಿ ಸಮಾಜದ ಅಧ್ಯಕ್ಷ ಎನ್.ನಾರಾಯಣ್, ನಗರಸಭಾ ಉಪಾಧ್ಯಕ್ಷ ರವಿಕುಮಾರ್, ದಲಿತ ಮುಖಂಡ ಕೆ.ಟಿ.ರಾಧಕೃಷ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಇಂದು ಬೆಳಿಗ್ಗೆ ನಗರದ ಹಳೆ ತಾಲೂಕು ಕಚೇರಿ ಆವರಣದಿಂದ ದೇವರ ದಾಸಿಮಯ್ಯರವರ ಬಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.







