ಐಪಿಎಲ್‌ನಿಂದ ವಿದೇಶಿ ಕ್ರಿಕೆಟ್ ಮಂಡಳಿಗಳಿಗೆ ಹಣದ ಹೊಳೆ
ಮುಂಬೈ, ಎ.12: ಮುಂಬೈನಲ್ಲಿ ಎ.9 ರಿಂದ ಆರಂಭವಾಗಿರುವ 9ನೆ ಆವೃತ್ತಿಯ ಐಪಿಎಲ್‌ನಲ್ಲ್ಲಿ ಪಾಲ್ಗೊಳ್ಳಲು ತಮ್ಮ ಆಟಗಾರರಿಗೆ ಅನುಮತಿ ನೀಡಿರುವ ಶ್ರೀಲಂಕಾ, ದಕ್ಷಿಣ ಆಫ್ರಿಕ ಹಾಗೂ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಗಳು ಒಟ್ಟು 10 ಲಕ್ಷ ಅಮೆರಿಕನ್ ಡಾಲರ್ ಆದಾಯ ಗಳಿಸಲಿವೆ.
ತಮ್ಮ ಆಟಗಾರರನ್ನು ಅತ್ಯಂತ ಶ್ರೀಮಂತ ಟ್ವೆಂಟಿ-20 ಲೀಗ್‌ನ ವಿವಿಧ ತಂಡಗಳಲ್ಲಿ ಆಡಲು ಅನುಮತಿ ನೀಡಿರುವುದಕ್ಕಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು 2.43 ಲಕ್ಷ ಯುಎಸ್ ಡಾಲರ್(1.6 ಕೋ.ರೂ.), ಕ್ರಿಕೆಟ್ ದಕ್ಷಿಣ ಆಫ್ರಿಕ 6.31 ಲಕ್ಷ ಯುಎಸ್ ಡಾಲರ್(4.2 ಕೋ.ರೂ.) ಹಾಗೂ ನ್ಯೂಝಿಲೆಂಡ್ ಕ್ರಿಕೆಟ್ 1.73 ಲಕ್ಷ ಯುಎಸ್ ಡಾಲರ್(1.1 ಕೋ.ರೂ.) ಸ್ವೀಕರಿಸಲಿದೆ ಎಂದು ಬಿಸಿಸಿಐ ತನ್ನ ತಿಂಗಳ ಆಯ-ವ್ಯಯ ಪಟ್ಟಿಯಲ್ಲಿ ಬಹಿರಂಗಪಡಿಸಿದೆ.
ಆಸ್ಟ್ರೇಲಿಯ, ಇಂಗ್ಲೆಂಡ್, ವೆಸ್ಟ್‌ಇಂಡೀಸ್ ಹಾಗೂ ಬಾಂಗ್ಲಾದೇಶದ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಈ ಆಟಗಾರರ ಕ್ರಿಕೆಟ್ ಮಂಡಳಿಗಳು ಬಿಸಿಸಿಐಯಿಂದ ಹಣದ ಖಜಾನೆ ನಿರೀಕ್ಷಿಸುತ್ತಿವೆ. ಬಿಸಿಸಿಐ ಈ ಮೂರು ಕ್ರಿಕೆಟ್ ಮಂಡಳಿಗೆ ಹಣ ಬಿಡುಗಡೆ ಮಾಡುವ ಸಾಧ್ಯತೆಯಿದೆ.





