ಭಾರತದ ಕೋಚ್ ಹುದ್ದೆ: ರವಿ ಶಾಸ್ತ್ರಿ ಫೇವರಿಟ್?

ಮುಂಬೈ, ಎ.12: ಇತ್ತೀಚೆಗೆ ಕೊನೆಗೊಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪ್ರಶಸ್ತಿ ವಿಶ್ವಾಸ ಮೂಡಿಸಿದ್ದ ಟೀಮ್ ಇಂಡಿಯಾ ಸೆಮಿ ಫೈನಲ್‌ನಲ್ಲಿ ತನ್ನ ಹೋರಾಟ ಕೊನೆಗೊಳಿಸಿತ್ತು. ಇದರ ಬೆನ್ನಿಗೇ ತಂಡದ ನಿರ್ದೇಶಕ ಹಾಗೂ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಶಾಸ್ತ್ರಿ ಅವರ ಒಪ್ಪಂದದ ಅವಧಿಯೂ ಅಂತ್ಯವಾಗಿತ್ತು.
ಇದೀಗ ಶಾಸ್ತ್ರಿ ಅವರು ಜುಲೈ-ಆಗಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಹೊಸ ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿರುವ ಬಿಸಿಸಿಐ ಕೋಚ್ ಆಯ್ಕೆಯ ಜವಾಬ್ದಾರಿ ಹೊತ್ತಿರುವ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯ ಸತತ ಸಂಪರ್ಕದಲ್ಲಿದೆ.
ತಂಡದ ಆಟಗಾರರು ಶಾಸ್ತ್ರಿ ಬೆಂಬಲಕ್ಕೆ ನಿಂತಿದ್ದು, ಶಾಸ್ತ್ರಿ ಅವರ ಒಪ್ಪಂದವನ್ನು ಪುನರ್‌ನವೀಕರಣ ಮಾಡಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ನಾವು ಇತ್ತೀಚೆಗೆ ಕೆಲವು ಆಟಗಾರರನ್ನು ಸಂಪರ್ಕಿಸಿದ್ದು, ಹೆಚ್ಚಿನ ಹಿರಿಯ ಆಟಗಾರರು ಶಾಸ್ತ್ರಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಅವರು ಹುದ್ದೆಯಲ್ಲಿ ಮುಂದುವರಿಯುವುದನ್ನು ಇಷ್ಟಪಡುತ್ತಿದ್ದಾರೆ.
ಕೋಚ್ ಆಯ್ಕೆಯ ಸಂಬಂಧ ನಿರ್ಧಾರ ಶೀಘ್ರವೇ ತೆಗೆದುಕೊಳ್ಳಲಿದ್ದು, ಟೀಮ್ ಡೈರೆಕ್ಟರ್ ಹುದ್ದೆಯ ಬದಲಿಗೆ ಪೂರ್ಣಕಾಲಿಕ ಕೋಚ್‌ರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2014ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಬಳಿಕ ಶಾಸ್ತ್ರಿ ಅವರನ್ನು ತಂಡದ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿತ್ತು. ಶಾಸ್ತ್ರಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ತಂಡ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಯನ್ನು ಸೋತಿತ್ತು. ಆಸ್ಟ್ರೇಲಿಯದಲ್ಲಿ 2015ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ತನಕ ತಲುಪಿತ್ತು.
ಶ್ರೀಲಂಕಾ ನೆಲದಲ್ಲಿ 22 ವರ್ಷಗಳ ನಂತರ ಟೆಸ್ಟ್ ಸರಣಿಯನ್ನು ಜಯಿಸಿದ್ದ ಭಾರತ ಸ್ವದೇಶದಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧ ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿತ್ತು. 2016ರ ಆರಂಭದಲ್ಲಿ ಆಸ್ಟ್ರೇಲಿಯದಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿದ್ದ ಭಾರತ ಟ್ವೆಂಟಿ-20 ಸರಣಿಯಲ್ಲಿ ಕಾಂಗರೂ ಪಡೆಯ ವಿರುದ್ಧ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿ ಇತಿಹಾಸ ನಿರ್ಮಿಸಿತ್ತು. ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗಿತ್ತು.







