ಮಹಾರಾಷ್ಟ್ರದ ಐಪಿಎಲ್ ಪಂದ್ಯಗಳನ್ನು ಬೇರಡೆಗೆ ಸ್ಥಳಾಂತರಿಸಲು ಬಿಸಿಸಿಐ ಚಿಂತನೆ
ಮುಂಬೈ,. ಎ.12: ಬರ ಪೀಡಿತ ಮಹಾರಾಷ್ಟ್ರದಿಂದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬಗ್ಗೆ ಎಲ್ಲ ದಿಕ್ಕಿನಿಂದಲೂ ಒತ್ತಡವನ್ನು ಎದುರಿಸುತ್ತಿರುವ ಬಿಸಿಸಿಐ ಐಪಿಎಲ್ ಪಂದ್ಯಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲು ಯೋಜನೆ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ
. 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಹಾಗೂ ಪುಣೆ ಮಹಾನಗರಗಳಲ್ಲಿ ಕ್ರಮವಾಗಿ 9 ಹಾಗೂ 8 ಪಂದ್ಯಗಳು ನಿಗದಿಯಾಗಿವೆ. ಆರೆಂಜ್ ಸಿಟಿ ನಾಗ್ಪುರದಲ್ಲಿ 3 ಪಂದ್ಯಗಳು ನಿಗದಿಯಾಗಿತ್ತು. ಮಹಾರಾಷ್ಟ್ರದ ಮೂರು ಸ್ಟೇಡಿಯಂಗಳ ಪಿಚ್‌ನಲ್ಲಿ ಯಥೇಚ್ಛ ನೀರು ಬಳಕೆಯಾಗುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಾಂಖೆಡೆ ಸ್ಟೇಡಿಯಂನಲ್ಲಿ ಎ.9 ರಂದು ನಡೆದ ಉದ್ಘಾಟನಾ ಪಂದ್ಯ ನಡೆಯಲು ಮಾತ್ರ ಅನುಮತಿ ನೀಡಿತ್ತು. ಉಳಿದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು ಒಳಿತು ಎಂದು ರಾಜ್ಯ ಸರಕಾರ ಹಾಗೂ ಬಿಸಿಸಿಐಗೆ ಸೂಚನೆ ನೀಡಿತ್ತು.
ಬಲ್ಲ ಮೂಲಗಳ ಪ್ರಕಾರ, ಬಿಸಿಸಿಐ ಈಗಾಗಲೇ ಕಾನ್ಪುರ, ಇಂದೋರ್ ಹಾಗೂ ರಾಂಚಿಯನ್ನು ಮೀಸಲು ಸ್ಥಳಗಳಾಗಿ ಆಯ್ಕೆ ಮಾಡಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಗ್ಪುರದಲ್ಲಿ ಆಡಬೇಕಾಗಿದ್ದ ಪಂದ್ಯವನ್ನು ತವರು ಮೈದಾನ ಮೊಹಾಲಿಗೆ ಸ್ಥಳಾಂತರಿಸಲಾಗುತ್ತದೆ.
ನಾಗ್ಪುರದಲ್ಲಿ ನಡೆಯಬೇಕಿದ್ದ ತನ್ನ ಐಪಿಎಲ್ ಪಂದ್ಯಗಳನ್ನು ಮೊಹಾಲಿಗೆ ಸ್ಥಳಾಂತರಿಸಲು ತಾನು ಸಿದ್ಧ ಎಂದು ಪಂಜಾಬ್ ಫ್ರಾಂಚೈಸಿ ಮಂಗಳವಾರ ಕೋರ್ಟ್‌ಗೆ ತಿಳಿಸಿತ್ತು.





