ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿಗೆ ಜಯಸೂರ್ಯ ಅಧ್ಯಕ್ಷ?
ಕೊಲಂಬೊ, ಎ.12: ಶ್ರೀಲಂಕಾದ ಮಾಜಿ ನಾಯಕ ಹಾಗೂ ಆಕ್ರಮಣಕಾರಿ ಎಡಗೈ ದಾಂಡಿಗ ಸನತ್ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮರಳಲು ಸಜ್ಜಾಗಿದ್ದಾರೆ.
46ರಹರೆಯದ ಜಯಸೂರ್ಯ ಕಳೆದ ವರ್ಷ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದರು. ಇನ್ನೋರ್ವ ಮಾಜಿ ಆಟಗಾರ ಅರವಿಂದ್ ಡಿಸಿಲ್ವಾ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಶ್ರೀಲಂಕಾ ಕ್ರಿಕೆಟ್‌ನ್ನು ಹೊಸ ಹಾದಿಯಲ್ಲಿ ಮುನ್ನಡೆಸಲು ಬಯಸಿದ್ದು, ನಾವು ಕೆಲವು ಬದಲಾವಣೆ ಮಾಡಲಿದ್ದೇವೆ. ಸನತ್ ಜಯಸೂರ್ಯರನ್ನು ಆಯ್ಕೆ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿದ್ದೇವೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಥಿಲಂಗ ಸುಮಥಿಪಾಲಾ ತಿಳಿಸಿದ್ದಾರೆ.
ಮಾಜಿ ವಿಕೆಟ್‌ಕೀಪರ್-ದಾಂಡಿಗ ರಮೇಶ್ ಕಲುವಿತರಣ ಹಾಗೂ ಮಾಜಿ ಆಫ್-ಸ್ಪಿನ್ನರ್ ರಂಜಿತ್ ಮದುರಸಿಂಘ ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ ಎಂದು ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಮೋಹನ್ ಡಿಸಿಲ್ವಾ ತಿಳಿಸಿದರು.
110 ಟೆಸ್ಟ್, 445 ಏಕದಿನ ಹಾಗೂ 31 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಜಯಸೂರ್ಯ ಈ ಹಿಂದೆ ಜನವರಿ 2013 ರಿಂದ ಮಾ.2015ರ ತನಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಈ ಅವಧಿಯಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶದಲ್ಲಿ 2014ರ ಟ್ವೆಂಟಿ-20 ವಿಶ್ವಕಪ್‌ನ್ನು ಜಯಿಸಿತ್ತು. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. ಆದರೆ, 2015ರ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಹೊರ ನಡೆದಿತ್ತು.







