ಕಾನೂನು ತಜ್ಞರ ಸಲಹೆ ನಂತರ ನಿರ್ಧಾರ: ಜಯಚಂದ್ರ
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ

ಬೆಂಗಳೂರು, ಎ.12: ರಾಜ್ಯ ಸರಕಾರ ರಚಿಸಿರುವ ಭ್ರಷ್ಟಾಚಾರ ನಿಗ್ರಹ ದಳವನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕಾನೂನು ತಜ್ಞರ ಅಭಿಪ್ರಾ ಯ ಪಡೆದು, ಮುಂದುವರಿಯುವ ನಿರ್ಧಾರ ತೆಗೆದು ಕೊಂಡಿದೆ. ದೇಶದ 18 ರಾಜ್ಯಗಳಲ್ಲಿನ ಎಸಿಬಿ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಬಳಿಕ ಕಾರ್ಯನಿರ್ವಹಣೆ ನಿಯಮಗಳನ್ನು ಅಂತಿಮಗೊಳಿಸಲು ಸರಕಾರ ನಿರ್ಧರಿಸಿದೆ.
ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಎಸಿಬಿ ಮಾರ್ಗಸೂಚಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಎಸಿಬಿ ತನಿಖೆಗೆ ಮೊದಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು, ಎಸಿಬಿಯ ಅತ್ಯುನ್ನತ ಹುದ್ದೆಗೆ ಐಎಎಸ್ ಅಧಿಕಾರಿ ನೇಮಕ ಮಾಡುವುದು ಹಾಗೂ ಪೊಲೀಸ್ ಇಲಾಖೆಯ ಡಿಯಲ್ಲಿ ತರುವ ವಿಚಾರಗಳ ಬಗ್ಗೆ ಗೊಂದಲಗಳಿದ್ದು, ಉಳಿದ ರಾಜ್ಯಗಳಲ್ಲಿನ ನಿಯಮ ಹಾಗೂ ಕಾರ್ಯ ನಿರ್ವಹಣೆ ನಿಯಮವನ್ನು ಅರಿತು ಮುಂದುವರಿ ಯುವಂತೆ ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಸರಕಾರ ಅದರಂತೆಯೇ ನಡೆದುಕೊಳ್ಳಲಿದೆ ಎಂದು ವಿವರಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಎಸಿಬಿಗೆ ಎಡಿಜಿಪಿಯೇ ಮುಖ್ಯಸ್ಥರಾಗಿದ್ದು, ಡೈರೆಕ್ಟರ್ ಜನರಲ್ ಹುದ್ದೆ ಸೃಷ್ಟಿಯಿಲ್ಲ. 30 ಜಿಲ್ಲೆಗಳಲ್ಲಿ ವಿಶೇಷ ಅಭಿಯೋಜಕರೂ ಕಾರ್ಯ ನಿರ್ವಹಿಸುವ ಬಗ್ಗೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ: ಎಸಿಬಿ ವಿರುದ್ಧ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರಕಾರದ ಪರವಾಗಿ ವಾದ ಮಂಡಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಅಡ್ವೊಕೇಟ್ ಜನರಲ್ ಸಲಹೆ ನೀಡಿದ್ದಾರೆ. ಅವರ ಸಲಹೆ ಆಧಾರದ ಮೇಲೆ ಸರಕಾರ ವಾದ ಮಂಡಿಸಲಿದೆ. ಅಂತೆಯೇ ಎಲ್ಲ ಜಿಲ್ಲೆಗಳಲ್ಲಿನ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು. ನೈಸ್ ಸಂಸ್ಥೆ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ಸೂಕ್ತ ವಾದ ಮಂಡಿಸಲು ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರಿಂದ ಕಾನೂನು ಸಲಹೆ ಪಡೆಯಲಾಗಿದೆ. ನೈಸ್ ಸಂಸ್ಥೆಗೆ ಈಗಾಗಲೇ ಅಗತ್ಯ ಭೂಮಿ ನೀಡಲಾಗಿದ್ದು, ಆದರೂ ನೈಸ್ ಸಂಸ್ಥೆ ತಮ್ಮ ಮೂಗಿನ ನೇರಕ್ಕೆ ಭೂಮಿ ಕೇಳುತ್ತಿದೆ. ಹೀಗಾಗಿ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ತಿರ್ಮಾನಿಸಲಾಗಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ಎಂದು ಹೇಳಿದರು.





