ನಿಯಮಾವಳಿ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ
ನ್ಯಾ.ಸುಭಾಷ್ ಬಿ. ಅಡಿ ಪ್ರಕರಣ

ಬೆಂಗಳೂರು, ಎ.12: ಶಾಸನಸಭೆಯಲ್ಲಿ ಲೋಕಾಯುಕ್ತ, ಉಪಲೋಕಾಯುಕ್ತರ ಪದಚ್ಯುತಿ ಪ್ರಕ್ರಿಯೆ ಕೈಗೊಳ್ಳುವುದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ನ್ಯಾ.ಸುಭಾಷ್ ಬಿ. ಅಡಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದಿಸಿ, ಕಾಂಗ್ರೆಸ್‌ನ 79 ಶಾಸಕರು ನ್ಯಾ.ಸುಭಾಷ್ ಬಿ ಅಡಿ ಉಪ ಲೋಕಾಯುಕ್ತ ಹುದ್ದೆಯಿಂದ ಪದಚ್ಯುತಗೊಳಿಸುವ ನಿರ್ಣಯಕ್ಕೆ ಸಹಿ ಹಾಕಿ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ನಿಯಮದ ಪ್ರಕಾರ ಪದಚ್ಯುತಿ ಪ್ರಸ್ತಾವನೆಯಲ್ಲಿ ಪದಚ್ಯುತಗೊಳಿಸಬೇಕಾದ ವ್ಯಕ್ತಿಯ ವಿರುದ್ಧದ ಆರೋಪಗಳನ್ನು ಮೊದಲು ಪ್ರಸ್ತಾಪಿಸಿ, ಕೊನೆಯಲ್ಲಿ ಸಹಿ ಮಾಡಬೇಕು. ಆದರೆ, ಪದಚ್ಯುತಿ ಪ್ರಸ್ತಾವನೆಯಲ್ಲಿ ಮೊದಲು ಶಾಸಕರು ಸಹಿ ಹಾಕಿ ಕೊನೆಯಲ್ಲಿ ಆರೋಪಗಳನ್ನು ಉಲ್ಲೇಖಿಸಲಾಗಿದೆ. ಅಂದರೆ ಪದಚ್ಯುತಿ ನಿರ್ಣಯಕ್ಕೆ ಸಹಿ ಹಾಕಿದವರು ನ್ಯಾ.ಅಡಿ ವಿರುದ್ಧದ ಆರೋಪಗಳನ್ನು ಗಮನಿಸಿಲ್ಲ. ಆ ಬಗ್ಗೆ ಅವರಿಗೆ ಮಾಹಿತಿಯೂ ಇಲ್ಲ. ಕೇವಲ ಸಹಿ ಹಾಕಿದ್ದಾರೆ ಅಷ್ಟೆ ಎಂದು ಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಎನ್.ಕುಮಾರ್ ಮತ್ತು ನ್ಯಾ.ಬಿ.ವೀರಪ್ಪಅವರಿದ್ದ ವಿಭಾಗೀಯ ಪೀಠ, ಶಾಸನಸಭೆಯಲ್ಲಿ ಪದಚ್ಯುತಿ ಪ್ರಕ್ರಿಯೆ ಕೈಗೊಳ್ಳುವುದಕ್ಕೆ ಯಾವುದಾದರು ನಿರ್ದಿಷ್ಟ ಕಾಯ್ದೆ ಅಥವಾ ನಿಯಮಾವಳಿಗಳಿವೆಯೇ ಎಂದು ಸರಕಾರಕ್ಕೆ ಪ್ರಶ್ನಿಸಿತು. ವಿಚಾರಣೆಗೆ ಹಾಜರಿದ್ದ ರಾಜ್ಯ ಅಡ್ವೊಕೇಟ್ ಜನರಲ್ ಮಧುಸೂದನ್ ಆರ್.ನಾಯಕ್, ಈ ಬಗ್ಗೆ ಪರಿಶೀಲಿಸಬೇಕು ಎಂದು ಉತ್ತರಿಸಿದರು.
ಈ ಹಿನ್ನೆಲೆಯಲ್ಲಿ ಶಾಸನಸಭೆಯಲ್ಲಿ ಪದಚ್ಯುತಿ ನಿರ್ಣಯ ಕೈಗೊಳ್ಳಲು ಅಸ್ತಿತ್ವದಲ್ಲಿರುವ ನಿಯಮಾವಳಿಗಳನ್ನು ಎ.13ಕ್ಕೆ ಕೋರ್ಟ್‌ಗೆ ಸಲ್ಲಿಸಲು ಅಡ್ವೊಕೇಟ್ ಜನರಲ್‌ಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.





