2002ರ ಅಪಹರಣ, ಸುಲಿಗೆ ಪ್ರಕರಣ ಬಿಜೆಪಿ ಮುಖಂಡನಿಗೆ ಜೀವಾವಧಿ

ವಡೋದರ, ಎ.12: ನಾದಿಯಾದ್ ನಗರಪಾಲಿಕೆಯ ಬಿಜೆಪಿ ಕೌನ್ಸಿಲರ್ ಭಾನು ಭರ್ವಾಡ್ ಅವರಿಗೆ ಸ್ಥಳೀಯ ಕೋರ್ಟೊಂದು 2002ರಲ್ಲಿ ನಡೆದ ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ 13 ಮಂದಿ ಇತರರೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ದೋಷಿಗಳೆಂದು ಪರಿಗಣಿತರಾದವರಿಗೆ ರೂ. 1 ಲಕ್ಷ ದಂಡವನ್ನೂ ವಿಧಿಸಲಾಗಿದೆ.
ಇದರ ಹೊರತಾಗಿ ನ್ಯಾಯಾಲಯವು ಇವರೆಲ್ಲರಿಗೂ 2 ವರ್ಷ ಕಠಿಣ ಸಜೆ ಹಾಗೂ ರೂ. 10,000 ದಂಡ ಹೆಚ್ಚುವರಿಯಾಗಿ ವಿಧಿಸಿದೆ ಈ ಪ್ರಕರಣದಲ್ಲಿ ಇತರ ನಾಲ್ಕು ಮಂದಿಗೆ ಆರು ತಿಂಗಳ ಸಜೆ ವಿಧಿಸಲಾಗಿದೆ. ಈ ಘಟನೆ 2002ರ ಜುಲೈ 8ರಂದು ನಡೆ ದಾಗ ಭಾನು ಕೌನ್ಸಿಲರ್ ಆಗಿರದೇ ಇದ್ದರೂ ನಂತರ ಎರಡು ಅವಧಿಗೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ.
ಈ ಪ್ರಕರಣದ ದೂರುದಾರರಾದ ಉಸ್ಮಾನ್ ಘನಿ ಆದಂ ವೋಹ್ರಾ ತಮ್ಮ ಉದ್ಯಮದ ಪಾಲುದಾರ ಶಾಹಿದ್ ನಾತುಭಾಯಿ ಜತೆ 2001ರಲ್ಲಿ ಹಣಕಾಸು ವಿಚಾರದಲ್ಲಿ ಮನಸ್ತಾಪ ಉಂಟಾದಾಗ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನಡೆಸಲಾದ ಒಡಂಬಡಿಕೆಯಂತೆ ವೋಹ್ರಾ ತಮ್ಮ ಪಾಲುದಾರ ನಾಥುಭಾಯಿಗೆ ರೂ .65 ಲಕ್ಷ ಕೊಡಬೇಕಿತ್ತು.
ಆದರೆ ಆತ ಈ ಮೊತ್ತವನ್ನು 2002ರ ತನಕ ಪಾವತಿಸದೇ ಇದ್ದಾಗ ನಾಥುಬಾಯಿಯ ಉದ್ಯಮವನ್ನು ನಿಭಾಯಿಸಲು ಪವರ್ ಆಫ್ ಅಟಾರ್ನಿ ಹೊಂದಿದ್ದ ನಾಲ್ಕು ಮಂದಿ ಭರ್ವಾಡ್ ಹಾಗೂ 13 ಮಂದಿ ಇತರರನ್ನು ಸಂಪರ್ಕಿಸಿ ವೋಹ್ರಾರನ್ನು ಅಪಹರಿಸಿ ಅವರಿಂದ ತಮಗೆ ಬರಬೇಕಿದ್ದ ಹಣ ಬರುವಂತೆ ನೋಡಿಕೊಳ್ಳಲು ಹೇಳಿದ್ದರು.
ಅಂತೆಯೇ ವೊಹ್ರಾರನ್ನು ವಾಹನವೊಂದರಲ್ಲಿ ಅಪಹರಿಸಿ ನಾದಿಯಾದ್ ಹೊರವಲಯದ ಗದ್ದೆಯೊಂದರ ಬಳಿಗೊಯ್ದು ಹಲ್ಲೆಗೈಯ್ಯಲಾಗಿತ್ತು.







