ಮುಂದಿನ ವರ್ಷದಿಂದ ಎಸೆಸೆಲ್ಸಿ, ಪಿಯುಸಿ ಪ್ರಶ್ನೆಪತ್ರಿಕೆ ಆನ್‌ಲೈನ್: ಕಿಮ್ಮನೆ

ಬೆಂಗಳೂರು, ಎ.12: ಮುಂದಿನ ವರ್ಷದಿಂದ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಆನ್‌ಲೈನ್ ಮೂಲಕ ಕಳುಹಿಸುವ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಮಂಗಳವಾರ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹೊರ ಬಂದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರಕಾರಿ ಶಾಲೆಗಳಲ್ಲೂ ವಿಟಿಯುಗಿಂತಲೂ ಸರಕಾರಿ ಶಾಲೆಗಳಲ್ಲಿ ಹೆಚ್ಚಿನ ಸೌಲಭ್ಯಗಳಿವೆ. ಹಾಗೆಯೇ ಕೆಲ ಸೌಲಭ್ಯಗಳ ಕೊರತೆಯೂ ಇದ್ದು, ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಪ್ರಥಮ ಹಂತದಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುವುದು. ಅದು ಯಶಸ್ವಿಯಾದರೆ ಆನ್‌ಲೈನ್ ಪ್ರಶ್ನೆ ಪ್ರತಿಕೆ ರವಾನಿಸುವ ಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಕಳುಹಿಸುವುದಾದರೆ ಕೆಲವು ಕಡೆ ಸೌಲಭ್ಯಗಳು ಇರುವುದಿಲ್ಲ. ಹೀಗಾಗಿ, ಪರೀಕ್ಷೆ ಕೇಂದ್ರಗಳನ್ನು ಕಡಿಮೆ ಮಾಡಿ ವಿದ್ಯಾರ್ಥಿಗಳನ್ನು ಆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಿಸಬೇಕಾಗುತ್ತದೆ. ಆದರೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದ ಮೇಲೆ ಮನೆಗೆ ವಾಪಸ್ ತೆರಳಲು ತೊಂದರೆ ಆಗುತ್ತದೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆನ್‌ಲೈನ್ ಪ್ರಶ್ನೆ ಪತ್ರಿಕೆ ಕಳುಹಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಕಟ್ಟೆಚ್ಚರದಲ್ಲಿ ಪರೀಕ್ಷೆ: ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪೊಲೀಸ್, ಕಂದಾಯ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ಶ್ರಮ ಇದರಲ್ಲಿದೆ ಎಂದು ಹೇಳಿದರು. ಇಲಾಖೆಯಲ್ಲಿಯೇ ಪ್ರಶ್ನೆ ಪತ್ರಿಕೆ ಸೋರಿಕೆ: ಇಲಾಖೆಯ ಖಜಾನೆ ಸೇರಿದಂತೆ ಪರೀಕ್ಷಾ ಕೇಂದ್ರಗಳಲ್ಲೂ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಮಾಹಿತಿಯಿದ್ದು, ಮುಂದಿನ ವರ್ಷದಿಂದ ಸಮಗ್ರ ಪರೀಕ್ಷಾ ನಿಯಮಗಳನ್ನು ಬದಲಾಯಿಸುತ್ತೇವೆ ಎಂದು ಹೇಳಿದರು.
ಉಪನ್ಯಾಸಕರೊಂದಿಗೆ ಸಭೆ: ಪದವಿ ಪೂರ್ವ ಉಪನ್ಯಾಸಕರು ಹಾಗೂ ಪ್ರಿನ್ಸಿಪಾಲರಿಗೆ ಪ್ರತಿಭಟನೆಯನ್ನು ಕೈಬಿಡುವಂತೆ ಈಗಾಗಲೇ ಹಲವು ಬಾರಿ ಮನವಿಯನ್ನು ಮಾಡಿಕೊಂಡಿದ್ದು, ಬುಧವಾರವೂ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಯಲಿದೆ ಎಂದು ಹೇಳಿದರು. ಅಲ್ಲದೆ, ಸಂಧಾನ ಸಭೆ ವಿಫಲವಾದರೆ ಅನಿವಾರ್ಯವಾಗಿ ಎಸ್ಮಾ ಜಾರಿಯ ಬಗ್ಗೆ ಚಿಂತನೆಯನ್ನೂ ನಡೆಸಲಾಗುವುದು ಎಂದು ಹೇಳಿದರು. ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆಗೆ ವಿದ್ಯಾರ್ಥಿಗಳು ಹಾಗೂ ಕೆಲ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ವೇತನವನ್ನು ಹೆಚ್ಚಿಸಬೇಡಿ. ನಿಮ್ಮಿಂದಿಗೆ ನಾವಿದ್ದೇವೆ ಎಂದು ತಮಗೆ ದೂರವಾಣಿ ಮೂಲಕ ಹೇಳಿದ್ದಾರೆ ಎಂದು ಹೇಳಿದರು.
ಮೇ 3 ಮತ್ತು 4ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಹೀಗಾಗಿ, ಈ ತಿಂಗಳ ಒಳಗಾಗಿ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಮುಗಿಸಿ ಮೇ 1ರಂದು ಫಲಿತಾಂಶ ಪ್ರಕಟಿಸುವ ಗುರಿಯನ್ನು ಸರಕಾರ ಹೊಂದಿದೆ. ಅಲ್ಲದೆ, ಉಪನ್ಯಾಸಕರು ಬಹಿಷ್ಕಾರ ಹಿಂಪಡೆಯದೇ ಇದ್ದರೆ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪರೀಕ್ಷೆ ಮತ್ತು ಪ್ರಶ್ನೆಪತ್ರಿಕೆಯಲ್ಲಿನ ಲೋಪಗಳ ಕುರಿತು ಈಗ ನನಗೆ ಸಂಪೂರ್ಣ ಮಾಹಿತಿ ಸಿಕ್ಕಿದ್ದು, ವಿಟಿಯು ಮಾದರಿಯಲ್ಲಿಯೇ ಮುಂದಿನ ವರ್ಷದಿಂದ ಆನ್‌ಲೈನ್ ಮೂಲಕ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿ ಪರೀಕ್ಷೆ ನಡೆಸುವ ಕುರಿತು ಗಂಭೀರ ಚಿಂತನೆ ನಡೆದಿದೆ.
- ಕಿಮ್ಮನೆ ರತ್ನಾಕರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ







