ಸಹಾಯ-ಸಹಕಾರ ವಿನಿಮಯ ಒಪ್ಪಂದಕ್ಕೆ ಭಾರತ -ಅಮೆರಿಕ ತಾತ್ವಿಕ ಒಪ್ಪಿಗೆ
ಹೊಸದಿಲ್ಲಿ,ಎ.12: ದುರಸ್ತಿ ಮತ್ತು ಅಗತ್ಯ ವಸ್ತುಗಳ ಪೂರೈಕೆಗಾಗಿ ಉಭಯ ಸೇನೆಗಳು ಪರಸ್ಪರರ ಸೌಲಭ್ಯಗಳು ಮತ್ತು ನೆಲೆಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಸಹಾಯ-ಸಹಕಾರ ವಿನಿಮಯ ಒಪ್ಪಂದವೊಂದಕ್ಕೆ ಭಾರತ ಮತ್ತು ಅಮೆರಿಕ ಮಂಗಳವಾರ ತಾತ್ವಿಕ ಒಪ್ಪಿಗೆಯನ್ನು ನೀಡಿವೆ.
‘ವಾರಗಳಲ್ಲಿ ’ ಅಥವಾ ‘ಮುಂಬರುವ ತಿಂಗಳುಗಳಲ್ಲಿ ’ ಅಂಕಿತ ಬೀಳಲಿರುವ ಈ ಒಪ್ಪಂದವು ಭಾರತದಲ್ಲಿ ಅಮೆರಿಕದ ಯೋಧರ ನಿಯೋಜನೆಯನ್ನು ಒಳಗೊಂಡಿರುವುದಿಲ್ಲ ಎಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಷ್ಟನ್ ಕಾರ್ಟರ್ ಅವರು ಸ್ಪಷ್ಟಪಡಿಸಿದರು.
ದ್ವಿಪಕ್ಷೀಯ ರಕ್ಷಣಾ ಸಂಬಂಧಗಳಿಗೆ ಇನ್ನಷ್ಟು ಬಲ ತುಂಬಿದ ಉಭಯ ರಾಷ್ಟ್ರಗಳು ತಮ್ಮ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳ ನಡುವೆ ದ್ವಿಪಕ್ಷೀಯ ಸಾಗರ ಭದ್ರತಾ ಮಾತುಕತೆಗಳಿಗೆ ನೂತನ ವ್ಯವಸ್ಥೆಯೊಂದನ್ನು ಸ್ಥಾಪಿಸಲು ಒಪ್ಪಿಕೊಂಡವು.
ಇಲ್ಲಿಯ ಸೌಥ್ ಬ್ಲಾಕ್‌ನಲ್ಲಿ ನಡೆದ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ಉಭಯ ರಾಷ್ಟ್ರಗಳು, ಎರಡೂ ನೌಕಾಪಡೆಗಳ ನಡುವೆ ಪ್ರಸ್ತುತ ನಡೆಯುತ್ತಿರುವ ಚರ್ಚೆಗಳ ವ್ಯಾಪ್ತಿಗೆ ಜಲಾಂತರ್ಗಾಮಿ ಸಂಬಂಧಿತ ವಿಷಯಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದವು.
ರಕ್ಷಣಾ ವ್ಯಾಪಾರ ಮತ್ತು ತಂತ್ರಜ್ಞಾನ ಉಪಕ್ರಮದಡಿ ಸಮರ್ಥ ಜೈವಿಕ ಪತ್ತೆ ಕೇಂದ್ರ ಸೇರಿದಂತೆ ಎರಡು ನೂತನ ಯೋಜನೆಗಳಿಗೆ ಭಾರತ ಮತ್ತು ಅಮೆರಿಕ ಒಪ್ಪಿಕೊಂಡಿವೆ ಎಂದು ಕಾರ್ಟರ್ ಹೇಳಿದರು.
ಭಾರತ ಮತ್ತು ಅಮೆರಿಕ ಸಶಸ್ತ್ರ ಪಡೆಗಳ ನಡುವೆ ಹೆಚ್ಚುತ್ತಿರುವ ವಿನಿಮಯದ ಕುರಿತು ಮಾತನಾಡಿದ ಪಾರಿಕ್ಕರ್ ಅವರು,ನಮ್ಮ ಪರಸ್ಪರ ತೊಡಗಿಸುಕೊಳ್ಳುವಿಕೆಯು ಗಾಢಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂತಹ ವಿನಿಮಯಗಳಿಗಾಗಿ ವ್ಯಾವಹಾರಿಕ ವ್ಯವಸ್ಥೆಗಳನ್ನು ನಾವು ಅಭಿವೃದ್ಧಿಗೊಳಿಸುವ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವೆ ಸಹಾಯ-ಸಹಕಾರ ವಿನಿಮಯ ಒಪ್ಪಂದವನ್ನು ನಾವು ತಾತ್ವಿಕವಾಗಿ ಒಪ್ಪಿಕೊಂಡಿದ್ದೇವೆ ಎಂದರು.







