ಗಾಂಜಾ ಸಾಗಾಟ: ಇಬ್ಬರ ಬಂಧನ
ಮಣಿಪಾಲ, ಎ.12: ಮಾರಾಟ ಮಾಡಲು ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸರು ಎ.11ರಂದು ಸಂಜೆ ವೇಳೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಬೆಂಗಳೂರು ಹೊಸಕೋಟೆಯ ಸೈಯದ್ ಗೌಸ್(51) ಹಾಗೂ ಉಡುಪಿ ಕುಕ್ಕಿಕಟ್ಟೆ ಇಂದಿರಾನಗರದ ಉದಯ ಕುಮಾರ್(32) ಎಂದು ಗುರುತಿಸಲಾಗಿದೆ. ಸೈಯದ್ ಗೌಸ್‌ನಿಂದ 1.100 ಕೆ.ಜಿ. ಗಾಂಜಾ, 250ರೂ., 1ಮೊಬೈಲ್, ಡ್ರೈವಿಂಗ್ ಲೈಸೆನ್ಸ್ ಪ್ರತಿ ಮತ್ತು ಉದಯ ಕುಮಾರ್ ನಿಂದ 1.050 ಕೆ.ಜಿ. ಗಾಂಜಾ, 140ರೂ., ಒಂದು ಮೊಬೈಲ್, ಪಾನ್ ಕಾರ್ಡನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾದ ಒಟ್ಟು ಮೌಲ್ಯ 20,000ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರಿನಿಂದ ಪ್ಯಾಸೆಂಜರ್ ರೈಲಿನಲ್ಲಿ ಬಂದು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಇಳಿದ ಇವರಿಬ್ಬರನ್ನು ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಗಾಂಜಾವನ್ನು ಉಡುಪಿ ಮತ್ತು ಮಣಿಪಾಲ ಪರಿಸರದಲ್ಲಿ ಮಾರಾಟ ಮಾಡಲು ತಂದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಗೌಸ್ ಕೋಲಾರ ಜಿಲ್ಲೆಯ ಚಿಂತಾಮಣಿಯಿಂದ ಗಾಂಜಾ ಖರೀದಿಸಿದ್ದರೆ, ಉದಯ ಕುಮಾರ್ ಗೌಸ್‌ನಿಂದ ಗಾಂಜಾ ಖರೀದಿಸಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







