ಸ್ನಾತಕೋತ್ತರ ಪದವೀಧರ ವೇಮುಲಾ ಸೋದರನಿಗೆ ಗುಮಾಸ್ತ ಹುದ್ದೆ ಕೊಡುಗೆ!
ಹೊಸದಿಲ್ಲಿ, ಎ.12: ಆತ್ಮಹತ್ಯೆಗೆ ಶರಣಾದ ಹೈದರಾಬಾದ್ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಸಹೋದರನಿಗೆ ದಿಲ್ಲಿ ಸರಕಾರವು ಗುಮಾಸ್ತ ದರ್ಜೆಯ ಉದ್ಯೋಗದ ಕೊಡುಗೆಯನ್ನು ನೀಡಿದೆ. ವೇಮುಲಾ ಸೋದರ ಭೂಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಅನುಕಂಪದ ನೆಲೆಯಲ್ಲಿ ನೀಡಿರುವ ಈ ಉದ್ಯೋಗವನ್ನು ಸ್ವೀಕರಿಸುವ ಬಗ್ಗೆ ತಾನು ಇನ್ನೂ ತೀರ್ಮಾನಿಸಿಲ್ಲವೆಂದು ರಾಜಾ ವೇಮುಲಾ ಮಂಗಳವಾರ ತಿಳಿಸಿದ್ದಾರೆ. ರಾಜಾ ವೇಮುಲಾ ಆನ್ವಯಿಕ ಭೂಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಫೆಬ್ರವರಿ 24ರಂದು ವೇಮುಲಾ ಅವರ ತಾಯಿಯವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ , ವೇಮುಲಾ ಸಹೋದರನಿಗೆ ಉದ್ಯೋಗ ನೀಡುವುದಾಗಿ ಪ್ರಕಟಿಸಿದ್ದರು.
ಪಾಂಡಿಚೇರಿ ಕೇಂದ್ರೀಯ ವಿವಿಯಲ್ಲಿ 72.8 ಶೇ.ಅಂಕಗಳೊಂದಿಗೆ ಎಂಎಸ್ಸಿ ಪದವಿ ಪಡೆದಿರುವ ರಾಜಾ, ದೇಶದ ಯಾವುದೇ ಕಾಲೇಜ್‌ನಲ್ಲಿ ಸಹಾಯಕ ಪ್ರೊಫೆಸರ್ ಆಗ ನೇಮಕಗೊಳ್ಳಲು ಆರ್ಹತೆ ನೀಡುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲೂ ತೇರ್ಗಡೆಗೊಂಡಿದ್ದಾರೆ. ರಾಜಾ ಅವರಿಗೆ ಸರಕಾರಿ ಹುದ್ದೆಗಳ ನೇಮಕಾತಿಗೆ ಇರುವ ಸಾಮಾನ್ಯ ವಿಧಾನಗಳಿಂದ ರಿಯಾಯಿತಿ ನೀಡಲಾಗಿದೆ. ನೈಪುಣ್ಯತಾ ಪರೀಕ್ಷೆಯಲ್ಲೂ ಅವರಿಗೆ ರಿಯಾಯಿತಿ ನೀಡಲಾಗಿದೆಯೆಂದು ಎಎಪಿ ಸರಕಾರವು ತಿಳಿಸಿದೆ. ಆದರೆ ಇದು ತಾತ್ಕಾಲಿಕ ಹುದ್ದೆಯೆಂದು ತಿಳಿದುಬಂದಿದೆ.
‘‘ನನ್ನ ಸಹೋದರ ಬದುಕಿದ್ದಾಗ, ಆತ ನಾನು ವಿದೇಶಿ ವಿವಿಯಲ್ಲಿ ಪಿಎಚ್‌ಡಿ ಅಧ್ಯಯನ ಮಾಡಬೇಕೆಂಬ ಕನಸು ಕಾಣುತ್ತಿದ್ದ. ಆತನ ಕನಸನ್ನು ನನಸು ಮಾಡಬೇಕೆಂಬ ಬಲವಾದ ಹಂಬಲ ನನಗಿದೆ. ನನ್ನ ಬಗ್ಗೆ ಆತ ಹೆಮ್ಮೆಪಟ್ಟುಕೊಳ್ಳುವಂತೆ ಮಾಡಬೇಕೆಂಬುದೇ ನನ್ನ ಬಯಕೆಯಾಗಿದೆ’’ ಎಂದು ರಾಜಾ ಹೇಳಿದ್ದಾರೆ.
ದಿಲ್ಲಿ ಸರಕಾರದ ನಿಯಮಾವಳಿಗಳ ಪ್ರಕಾರ, ಕ್ಲರ್ಕ್ ಮಟ್ಟದ ಗ್ರೂಪ್ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಮಾತ್ರ ಅನುಕಂಪದ ನೆಲೆಯಲ್ಲಿ ಉದ್ಯೋಗ ನೀಡಬಹುದಾಗಿದೆ.







