ಜಮ್ಮು ಕಾಶ್ಮೀರದ ಹ್ಯಾಂಡ್‌ವಾರ್‌ನಲ್ಲಿ ಘರ್ಷಣೆ; ಸಾವಿನ ಸಂಖ್ಯೆ3ಕ್ಕೆ ಏರಿಕೆ
ಭದ್ರತಾ ಪಡೆಯ ಗುಂಡಿಗೆ ಯುವ ಕ್ರಿಕೆಟಿಗ ಬಲಿ

ಶ್ರೀನಗರ, ಎ.13: ಜಮ್ಮು ಮತ್ತು ಕಾಶ್ಮೀರದ ಹ್ಯಾಂಡ್‌ವಾರ್‌ನನಲ್ಲಿ ಪ್ರತಿಭಟನೆಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಸ್ಥಳೀಯ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಸ್ಥಳೀಯರು ಪ್ರತಿಭಟನೆ ಆರಂಭಿಸಿದಾಗ , ಭದ್ರತಾ ಪಡೆಗಳು ಗುಂಡು ಹಾರಿಸಿದ ಪರಿಣಾಮವಾಗಿ ಯುವ ಕ್ರಿಕೆಟಿಗ ಹಾಗೂ ಹ್ಯಾಂಡ್ವಾರ್ ಸರಕಾರಿ ಕಾಲೇಜಿನ ವಿದ್ಯಾರ್ಥಿ ನಯೀಮ್ ಸೇರಿದಂತೆ ಮೂವರು ಸಾವಿಗೀಡಾಗಿದ್ದರು. ಐವರು ಗಾಯಗೊಂಡಿದ್ದರು
ತಮ್ಮತ್ತ ಕಲ್ಲು ತೂರಾಟ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಗುಂಡು ಹಾರಿಸಿತ್ತು.
ಸಾವಿಗೀಡಾದ ನಯೀಮ್ ಹ್ಯಾಂಡ್ವಾರ್ ಸರಕಾರಿ ಕಾಲೇಜಿನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ ಮನ್ . ಮೂರು ವರ್ಷಗಳ ಹಿಂದೆ ರಾಷ್ಟ್ರ ಮಟ್ಟದ ಅಂಡರ್19 ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ್ದರು. ಅವರು ವಿವಿಧ ಕ್ರಿಕೆಟ್ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಿರುವುದು. ಜಮ್ಮು ಮತ್ತು ಕಾಶ್ಮೀರದ ಆಲ್‌ರೌಂಡರ್ ಪರ್ವೆಝ್ ರಸೂಲ್ ಜೊತೆ ನೆಟ್ ಪ್ರಾಕ್ಟೀಸ್ ಗಳಲ್ಲಿ ಭಾಗವಹಿಸಿರುವ ಆನೇಕ ಫೋಟೊಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡತೊಡಗಿವೆ.
ಆರ್ಮಿಯು ಪ್ರಕರಣದ ತನಿಖೆಗೆ ಆದೇಶ ನೀಡಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪರಿಸ್ಥಿತಿಯ ನಿಯಂತ್ರಣಕ್ಕೆ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.





