ಒಂದು ಗ್ರಾಂ ಚಿನ್ನದಿಂದ ಎಷ್ಟು ಕಿ.ಮೀ. ಉದ್ದದ ತಂತಿ ಎಳೆಯಬಹುದು?
ನೀವು ಚಿನ್ನ ಪ್ರೀಯರೆ... ಹಾಗಾದರೆ ಅದರ ಬಗ್ಗೆ ಒಂದಿಷ್ಟು ತಿಳಿಯಿರಿ
ಅಲಂಕಾರದಲ್ಲಿ ಪ್ರಪಂಚದಲ್ಲೇ ಭಾರತಕ್ಕೆ ಮೊದಲನೆ ಸ್ಥಾನವಿದೆ. ಭಾರತೀಯ ಜನರು ಅಲಂಕಾರ ಪ್ರಿಯರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅಲಂಕಾರಕ್ಕಾಗಿ ಭಾರತೀಯರು ಹೆಚ್ಚಾಗಿ ಅವಲಂಭಿಸಿರುವುದು ಆಭರಣವನ್ನು. ಆಭರಣಗಳಲ್ಲಿ ಚಿನ್ನಜಾತಿ, ಮತ ಭೇದವಿಲ್ಲದೆ ಮಹಿಳೆಯರು, ಮಕ್ಕಳು, ಪುರುಷರು, ಬಡವರು, ಬಲ್ಲಿದರನ್ನು ತನ್ನತ್ತ ಆಕರ್ಷಿಸುತ್ತದೆ. ಚಿನ್ನಕ್ಕೆ ಹೋಲಿಸಬಹುದಾದ ಮತ್ತೊಂದು ಲೋಹವೇ ಇಲ್ಲ. ಪ್ಲಾಟಿನಮ್ ಚಿನ್ನಕ್ಕಿಂತಲೂ ಬೆಲೆಯಲ್ಲಿ ದುಬಾರಿ. ಕಬ್ಬಿಣ ಚಿನ್ನಕ್ಕಿಂತಲೂ ಗಟ್ಟಿ. ಆದರೆ, ಒಬ್ಬ ವ್ಯಕ್ತಿಯನ್ನು ಗುಣಗಾನ ಮಾಡುವಾಗ ಚಿನ್ನದಂತಹ ಮನುಷ್ಯ ಎಂದು ಗುಣಗಾನ ಮಾಡುತ್ತಾರೆ. 600 ದಶಲಕ್ಷ ವರ್ಷಗಳಷ್ಟು ಹಿಂದೆಯೇ ಭೂಮಿಯಲ್ಲಿರುವ ವಿವಿಧ ಶಿಲೆಗಳಲ್ಲಿ ಚಿನ್ನ ಹುದುಗಿರುವುದು ಕಂಡು ಬರುತ್ತದೆ ಎಂದು ಭೂಗರ್ಭ ಶಾಸ್ತ್ರ ತಿಳಿಸುತ್ತದೆ.
ಭಾರತದಲ್ಲಿ ಚಿನ್ನದ ಪರಂಪರೆ ಹಲವು ಸಾವಿರ ವರ್ಷಗಳಿಂದ ನಿರಂತರವಾಗಿ ನಡೆದು ಬಂದಿದೆ. ಆಧುನಿಕ ಬಾಹ್ಯಾಕಾಶ, ಕಂಪ್ಯೂಟರ್ ಯುಗದಲ್ಲೂ ಚಿನ್ನದ ಬೇಡಿಕೆ ಕಡಿಮೆಯಾಗಿಲ್ಲ. ಈಗಲೂ ಚಿನ್ನ ತನ್ನ ಹಿಂದಿನ ಸ್ಥಾನಮಾನಗಳನ್ನು ಉಳಿಸಿಕೊಂಡು ಬಂದಿದೆ. ಹತ್ತು ಲಕ್ಷ ರೂಪಾಯಿ ನೋಟುಗಳ ಕಂತೆಯನ್ನು ಆಧುನಿಕ ಬ್ರೀಫ್‌ಕೇಸ್‌ನಲ್ಲಿ ಇರಿಸುವುದು ಕಷ್ಟ. ಆದರೆ, ಅದರೊಳಗೆ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಒಯ್ಯುವುದು ಸುಲಭ. ಚಿನ್ನ ಯಾವ ದ್ರವದಲ್ಲೂ ಕರಗದ, ತುಕ್ಕು ಹಿಡಿಯದ ವೈಶಿಷ್ಟ್ಯ ಹೊಂದಿದೆ. ಚಿನ್ನ ರಾಜದ್ರವದಲ್ಲಿ ಮಾತ್ರ ಕರಗುವ ವಸ್ತು. ನೈಟ್ರಿಕ್ ಆಮ್ಲ ಹಾಗೂ ಹೈಡ್ರೋಕ್ಲೋರಿಕ್ ಆಮ್ಲಗಳ ಮಿಶ್ರಣವೇ ಈ ರಾಜದ್ರವ. ಚಿನ್ನದ ಈ ವೈಶಿಷ್ಟ್ಯದಿಂದಾಗಿಯೇ ಅದನ್ನು ಕೃತಕ ದಂತಕ್ಕಾಗಿ, ಆರ್ಯುವೇದ ಔಷಧದಲ್ಲಿ ಭಸ್ಮವಾಗಿ ಕೈಗಾರಿಕೆಗಳಲ್ಲಿ ಎಲೆಕ್ಟ್ರಾನಿಕ್ ಉದ್ಯಮದಲ್ಲಿ ಮೊಬೈಲ್ ದೂರವಾಣಿಗಳಲ್ಲಿ ಕಂಪ್ಯೂಟರ್ ಸಾಫ್ಟ್ ವೇರ್‌ಗಳಲ್ಲಿ ಬಳಸುತ್ತಾರೆ. ಪ್ರತೀ ವರ್ಷವೂ ಪ್ರಪಂಚದ ನಾನಾ ಗಣಿಗಳಲ್ಲಿ ಸುಮಾರು 100 ಮಿಲಿಯನ್ ಟನ್ ಅದಿರನ್ನು ಶುದ್ಧಗೊಳಿಸಿ 1,100 ಟನ್ ಚಿನ್ನವನ್ನು ಪಡೆಯಲಾಗುತ್ತಿದೆ. ಸಮುದ್ರದ ನೀರಿನಲ್ಲೂ ಚಿನ್ನ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಒಂದು ಘನಮೈಲಿ ನೀರಿನಲ್ಲಿ ಸುಮಾರು 6 ಲಕ್ಷ ಔನ್ಸುಗಳಷ್ಟು ಚಿನ್ನ ಇರುತ್ತದೆಂದು ಅಂದಾಜು ಮಾಡಲಾಗಿದೆ. ಇದರಿಂದ ಚಿನ್ನ ಪಡೆಯುವುದು ಲಾಭದಾಯಕ ಅಲ್ಲ. ಆದರೂ ವಿಜ್ಞಾನಿಗಳು ಸಮುದ್ರದಿಂದ ಚಿನ್ನ ಪಡೆಯುವ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಪ್ರಪಂಚದಲ್ಲಿ ಸುಮಾರು 75 ದೇಶಗಳಲ್ಲಿ ಚಿನ್ನ ದೊರೆಯುತ್ತದೆ. ದೊರೆಯುವ ಒಟ್ಟು ಪ್ರಮಾಣ 1 ಸಾವಿರ ಮಿಲಿಯ ಔನ್ಸುಗಳು. ರಷ್ಯದ ನಿಕ್ಷೇಪಗಳು ಒಳ್ಳೆಯ ಗುಣಮಟ್ಟದ್ದು. ದಕ್ಷಿಣ ಆಫ್ರಿಕದ ನಿಕ್ಷೇಪಗಳಲ್ಲಿ ಸುಮಾರು 50 ಕೋಟಿ ಔನ್ಸ್ ಚಿನ್ನ ದೊರೆಯುತ್ತದೆ.
ಅಮೇರಿಕದ ಸಂಯುಕ್ತ ಸಂಸ್ಥಾನ ಹಾಗೂ ಅಲಾಸ್ಕಗಳಲ್ಲಿ ಸುಮಾರು 6 ಕೋಟಿ 90 ಲಕ್ಷ ಔನ್ಸು ದೊರಕುತ್ತದೆ. ಇವುಗಳು ವಿಶ್ವದಲ್ಲೇ ಅತ್ಯಂತ ಅಧಿಕ ಪ್ರಮಾಣದ ಚಿನ್ನ ದೊರೆಯುವ ಪ್ರದೇಶಗಳಾಗಿವೆ. ಅಂದರೆ, ವಿಶ್ವದಲ್ಲಿ ಭಾರತ ಕೇವಲ ಶೇಖಡಾ 2 ಭಾಗ, ಅಮೆರಿಕಾ ಶೇಕಡಾ 10, ದಕ್ಷಿಣ ಆಫ್ರಿಕಾ ಶೇಕಡಾ 50 ಭಾಗ ಚಿನ್ನವನ್ನು ಉತ್ಪಾದಿಸುತ್ತದೆ. ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಹಟ್ಟಿ ಬರದ ನಾಡೆಂದು ಗುರುತಿಸಲ್ಪಟ್ಟರೂ ಅಲ್ಲಿ ಬಂಗಾರದ ಬೆಳಕು ಪಸರಿಸಿದೆ. ಕೋಲಾರ ಚಿನ್ನದ ಗಣಿಯ ಕೆಲಸ ಸ್ಥಗಿತಗೊಂಡಿದ್ದು, ಹಟ್ಟಿ ಚಿನ್ನದ ಗಣಿ ಕಾರ್ಯತತ್ಪರವಾಗಿದೆ. ಹಟ್ಟಿ ಚಿನ್ನದ ಗಣಿ ಕಂಪೆನಿ ನಿಯಮಿತ ಚಿನ್ನವನ್ನು ಉತ್ಪಾದಿಸುತ್ತಿರುವ ಭಾರತದ ಪ್ರಮುಖ ಗಣಿಗಾರಿಕೆಯ ಕೇಂದ್ರವಾಗಿದೆ. ಇಂದು ಹಟ್ಟಿಯ ಚಿನ್ನದ ಗಣಿಯಲ್ಲಿ ಸುಮಾರು 4,925 ಜನ ಕಾರ್ಮಿಕರು ಕೆಲಸ ರ್ವಹಿಸುತ್ತಿದ್ದಾರೆ. ಇಲ್ಲಿ ನೆಲದ ಆಳದಲ್ಲಿ ಬೆಣಚು ಕಲ್ಲಿನ ಹಾಗೂ ಸಲ್ಫೈಡ್‌ನ ನಿಕ್ಷೇಪ ಕಂಡು ಬಂದಿದೆ. ಈ ಗಣಿಯಲ್ಲಿ ಇನ್ನೂ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ಗಣಿಗಾರಿಕೆ ನಡೆಸಬಹುದು ಎಂದು ಅಂದಾಜು ಮಾಡಿದ್ದಾರೆ. ಚಿನ್ನದ ಅಧಿರನ್ನು ಪಡೆಯಲು ಭೂಮಿಯ ಒಳಗೆ ಸುಮಾರು 780 ಮೀಟರ್ ದಾಟಿ ಹೋಗಬೇಕಾಗುತ್ತದೆ. ಬೇರೆ ಬೇರೆ ಮಟ್ಟದಲ್ಲಿ ಭೂಮಿಯನ್ನು ಕೊರೆಯುತ್ತಾ ಹೋಗುತ್ತಾರೆ. ಪ್ರಸ್ತುತ 24ರಿಂದ 26ನೆ ಮಟ್ಟದ ಅಂದರೆ ಸುಮಾರು 800 ಮೀಟರ್ ಆಳದಲ್ಲಿ ಕೆಲಸ ನಡೆಯುತ್ತಿದೆ. ಈ ಹಂತದಲ್ಲಿ ಸುಮಾರು 20 ವರ್ಷದವರೆಗೂ ಚಿನ್ನವನ್ನು ಪಡೆಯಬಹುದು. 31ನೆ ಮಟ್ಟದವರೆಗೂ ಆಳ ಮಾಡಬಹುದೆಂದು ಬಳಿಕ ಉಪ ಮಟ್ಟಗಳನ್ನು ಮಾಡಬೇಕಾಗಬಹುದೆಂದೂ ಅಂದಾಜು ಮಾಡಲಾಗಿದೆ. ಗಣಿಯಿಂದ ಚಿನ್ನವನ್ನು ಹೊರತೆಗೆಯುವುದು ತುಂಬಾ ಕಠಿಣವಾದ, ಅಪಾಯಕಾರಿಯಾದ ಕೆಲಸ. ಸಿಡಿಮದ್ದುಗಳನ್ನು ಬಳಸಿ ಒಡೆಯಬೇಕಾಗುತ್ತದೆ. ಆ ಸಂದರ್ಭಗಳಲ್ಲಿ ಕಲ್ಲು, ಮಣ್ಣಿನ ಕುಸಿತಗಳ ಸಾಧ್ಯತೆ ಇರುತ್ತದೆ. ಮನುಷ್ಯ ಚಿನ್ನದ ಬಳಕೆಯನ್ನು ಆರಂಭಿಸಿ ಸುಮಾರು ಆರು ಸಾವಿರ ವರ್ಷಗಳಾಗಿವೆ.
ಚಿನ್ನಕ್ಕಾಗಿ ಮನುಷ್ಯ ಸಾವಿರಾರು ಮೀಟರ್ ಆಳಕ್ಕೆ ಇಳಿದಿದ್ದಾನೆ. ಇಲ್ಲಿಯವರೆಗೆ ಸರಿಸುಮಾರು 1,30,407 ಟನ್ ಚಿನ್ನ ನೆಲದಿಂದ ಬಿಡುಗಡೆಯಾಗಿದೆ. ಇಲ್ಲಿಯವರೆಗೆ ಹೊರತಂದ ಎಲ್ಲ ಚಿನ್ನವನ್ನು ಒಂದೆಡೆ ಸೇರಿಸಿದರೂ ಅದನ್ನು ಸುಲಭವಾಗಿ 20 ಘನ ಮೀಟರ್ ಪೆಟ್ಟಿಗೆಯಲ್ಲಿ ತುಂಬಿಸಿ ಇಡಬಹುದು. ಅಂದರೆ, 20 ಮೀಟರ್ ಉದ್ದದ, 20 ಮೀಟರ್ ಅಗಲದ, 20 ಮೀಟರ್ ಎತ್ತರದ ಒಂದು ಕೋಣೆಯಲ್ಲಿ ಇರಿಸಬಹುದಾಗಿದೆ. ಒಂದು ಗ್ರಾಂ ತೂಕದ ಚಿನ್ನದಿಂದ 2.5 ಕಿಲೋ ಮೀಟರ್ ದೂರ ತಂತಿ ಎಳೆಯಬಹುದು. ಒಂದು ಟನ್ ಚಿನ್ನದಿಂದ ಭೂಮಿಯಿಂದ ಚಂದ್ರನವರೆಗೆ ಮರಳಿ ಭೂಮಿಗೆ ತಂತಿ ಎಳೆಯಬಹುದು. ಒಂದು ಸೆಂಟಿಮೀಟರ್ ದಪ್ಪದ ಚಿನ್ನದಿಂದ ಒಂದು ಲಕ್ಷ ತೆಳುವಾದ ತಗಡುನ್ನು ಬೇರ್ಪಡಿಸಬಹುದು. ಒಂದು ಔನ್ಸ್ ಚಿನ್ನದ ದ್ರವದಿಂದ 1,600 ಕಿಲೋ ಮೀಟರ್ ಉದ್ದದ ತಂತಿಗೆ ಲೇಪನ ಮಾಡಬಹುದು. ಒಂದು ಟನ್ ಚಿನ್ನ 1.86 ಘನ ಅಡಿಯಷ್ಟು ಮಾತ್ರ ಇರುತ್ತದೆ. ಅಂದರೆ ಸಾಧಾರಣವಾಗಿ ನಮ್ಮ ಮನೆಗಳಲ್ಲಿರುವ ಒಂದು ಟಿವಿ ಪೆಟ್ಟಿಗೆಯಷ್ಟು ಮಾತ್ರ. ಭಾರತದಲ್ಲಿ ಕೈ ಗಡಿಯಾರಗಳ ತಯಾರಿಕೆಯಲ್ಲಿ ಒಂದು ವರ್ಷಕ್ಕೆ ಒಂದು ಟನ್ ಚಿನ್ನ ಬಳಸಲಾಗುತ್ತದೆ. 2001ರಲ್ಲಿ ನಮ್ಮ ದೇಶ 325 ಟನ್ ಚಿನ್ನ ಖರೀದಿಸಿತ್ತು. 2003ರಲ್ಲಿ 900 ಟನ್‌ಗೆ ಏರಿತು.
(ಆಧಾರ: ರಾಜಲೋಹ ಚಿನ್ನ)