ಕೇರಳ ದೇವಸ್ಥಾನ ದುರಂತ: ಚರ್ಚ್‌ನಿಂದ ನೆರವು ಸಂಗ್ರಹ

ಹೊಸದಿಲ್ಲಿ,ಎ.13: ಕೇರಳದ ಕೊಲ್ಲಂ ಬಳಿಯ ಪುತ್ತಿಂಗಲ್ ದೇವಿ ದೇವಿಸ್ಥಾನದಲ್ಲಿ ಸುಡುಮದ್ದು ಪ್ರದರ್ಶನದ ಸಂದರ್ಭ ಸಂಭವಿಸಿದ ಭೀಕರ ಅಗ್ನಿ ದುರಂತದ ಸಂತ್ರಸ್ತರೊಂದಿಗೆ ಒಗ್ಗಟ್ಟಿನ ದ್ಯೋತಕವಾಗಿ ದಿಲ್ಲಿಯಲ್ಲಿ ಕೇಂದ್ರಕಚೇರಿ ಮತ್ತು ವಿಶ್ವಾದ್ಯಂತ ಶಾಖೆಗಳನ್ನು ಹೊಂದಿರುವ ಬಿಲೀವರ್ಸ್ ಚರ್ಚ್ ಅವರಿಗೆ ಪರಿಹಾರವನ್ನೊದಗಿಸಲು ಔಷಧಿಗಳು,ಆಹಾರ ಮತ್ತು ಬಟ್ಟೆಬರೆಗಳನ್ನು ಸಂಗ್ರಹಿಸುತ್ತಿದೆ.
ಕೊಲ್ಲಮ್‌ನಿಂದ 35 ಕಿ.ಮೀ.ದೂರದಲ್ಲಿರುವ ತನ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡವೊಂದನ್ನು ಪರಿಹಾರ ಕಾರ್ಯಾಚರಣೆಗಳಲ್ಲಿ ನೆರವಿಗೆ ನಿಯೋಜಿಸಿರುವ ಚರ್ಚ್,ಗಾಯಾಳುಗಳಿಗೆ ಉಚಿತ ಚಿಕಿತ್ಸೆಯನ್ನೊದಗಿಸುತ್ತಿದೆ. ಚರ್ಚ್‌ನ ಹಲವಾರು ಸ್ವಯಂಸೇವಕರು ಪರಿಹಾರ ಕಾರ್ಯಾಚರಣೆಗಳಲ್ಲಿ ಸ್ಥಳೀಯಾಡಳಿತಕ್ಕೆ ನೆರವಾಗುತ್ತಿದ್ದಾರೆ ಎಂದು ಚರ್ಚ್‌ನ ಕೆ.ಪಿ.ಯೋಹಾನನ್ ತಿಳಿಸಿದರು.
ಕೊಲ್ಲಮ್‌ನಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಮತ್ತು ಪುನರ್ ನಿರ್ಮಾಣ ಕಾರ್ಯಗಳಲ್ಲಿ ನೆರವಾಗಲು ವಂತಿಗೆ ಸಂಗ್ರಹ ಸೇರಿದಂತೆ ಸಂಪನ್ಮೂಲಗಳನ್ನು ಚರ್ಚ್ ಕ್ರೋಢೀಕರಿಸುತ್ತಿದೆ ಎಂದು ಬಿಲೀವರ್ಸ್ ಚರ್ಚ್‌ನ ದಿಲ್ಲಿ ಕೇಂದ್ರದ ಬಿಷಪ್ ಸೈಮನ್ ಜಾನ್ ತಿಳಿಸಿದರು.





