ಭೀಕರ ಬರಗಾಲ: ಮಹಾರಾಷ್ಟ್ರದಿಂದ ಐಪಿಎಲ್ ಎತ್ತಂಗಡಿ
ಬಾಂಬೆ ಹೈಕೋರ್ಟ್ ಹುಕುಂ

ಮುಂಬೈ, ಎ.13: ಬರಗಾಲದ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಮೇ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಯಾವುದೇ ಪಂದ್ಯ ನಡೆಸದಂತೆ ಬುಧವಾರ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ.
ಮೇ ತಿಂಗಳಲ್ಲಿ ಫೈನಲ್(ಮೇ 29) ಸೇರಿದಂತೆ ಐಪಿಎಲ್‌ನ 13 ಪಂದ್ಯಗಳು ನಿಗದಿಯಾಗಿದೆ. ಆದರೆ ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸಬೇಕಾದ ಸವಾಲು ಬಿಸಿಸಿಐಗೆ ಎದುರಾಗಿದೆ.
ಮಹಾರಾಷ್ಟ್ರ ರಾಜ್ಯದ ಮುಂಬೈ ,ಪುಣೆ, ನಾಗ್ಪುರ ಸ್ಟೇಡಿಯಂನಲ್ಲೀ ಐಪಿಎಲ್‌ನ 20 ಪಂದ್ಯಗಳು ಈಗಾಗಲೇ ನಿಗದಿಯಾಗಿದೆ. ಈ ಪೈಕಿ 7 ಪಂದ್ಯಗಳು ಎಪ್ರಿಲ್‌ನಲ್ಲಿ ನಡಯಲಿದೆ.ಒಂದು ಪಂದ್ಯ ಮಾತ್ರ ಇದೀಗ ನಡೆದಿದೆ.
ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಪೀಠದ ಮುಂದೆ ಮುಂಬೈ ಮತ್ತು ಪುಣೆ ತಂಡಗಳು ಹಲವು ಕೊಡುಗೆಗಳನ್ನು ಪ್ರಕಟಿಸಿತು. ತೊಂದರೆಗೊಳಗಾಗಿರುವ ರೈತರಿಗೆ ನೆರವಾಗಲು ಮುಖ್ಯ ಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ, ಸರಕಾರ ನಿಗದಿಪಡಿಸಿದ ಸ್ಥಳಗಳಿಗೆ 60 ಲಕ್ಷ ಲೀಟರ್ ನೀರು ಪೂರೈಕೆ ಮಾಡುವುದಾಗಿ ಕ್ರಿಕೆಟ್ ಸಂಸ್ಥೆಗಳು ನ್ಯಾಯಾಲಯಕ್ಕೆ ತಿಳಿಸಿತು. ಐಪಿಎಲ್ ಪಂದ್ಯಗಳ ಸ್ಥಳಾಂತರ ತಪ್ಪಿಸುವ ಪ್ರಯತ್ನ ಫಲಕಾರಿಯಾಗಲಿಲ್ಲ
ಹೈಕೋರ್ಟ್ ನಡೆಸಿದ ಸತತ ವಿಚಾರಣೆಗಳಲ್ಲಿ ಮುಖ್ಯ ಮಂತ್ರಿ ದೇವೆಂದ್ರ ಫಡ್ನಾವಿಸ್ ನೇತೃತ್ವದ ಮಹಾರಾಷ್ಟ್ರ ಸರಕಾರ ಮತ್ತು ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತು. ಕೃಷಿಕರು ನೀರಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂಬೈ, ಪುಣೆ ಮತ್ತು ನಾಗ್ಪುರದಲ್ಲಿ ಜನರು ನೀರು ಇಲ್ಲದೆ ತತ್ತರಿಸಿರುವಾಗ ಪಿಚ್‌ಗೆ ಯಾಕೆ ನೀರು ಸುರಿಯುತ್ತಿರುವಿರಿ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ನ್ಯಾಯಾಲಯದ ತೀರ್ಪಿಗೂ ಮುನ್ನ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಸ್ಟಾರ್ ಹೋಟೆಲ್‌ಗಳಿಗೆ ಈಜು ಕೊಳಗಳನ್ನು ಖಾಲಿ ಮಾಡಲು ಹೇಳಲಾಗಿದೆಯೇ ಎಂದು ಪ್ರಶ್ನಿಸಿದರು.
ಬಿಸಿಸಿಐ ಮಂಗಳವಾರ ನೀಡಿರುವ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಪಿಚ್ ತಯಾರಿಗೆ ತಾಜ್ಯ ಸಂಸ್ಕರಿಸಿದ ನೀರನ್ನು ಬಳಸುವುದಾಗಿ ಹೇಳಿತ್ತು. ಪಂದ್ಯದ ವೇಳೆ 60ಲಕ್ಷ ಲೀಟರ್ ಬಳಕೆಯಾಗುವುದಾಗಿ ಆರೋಪದ ಬಗ್ಗೆ ಬಿಸಿಸಿಐ ನ್ಯಾಯಾಲಯಕ್ಕೆ ಹೇಳಿಕೆ ನೀಡಿತ್ತು.
ಇದೇ ವೇಳೆ ಪುಣೆ ಫಾಂಚೈಸ್ ತಂಡವು ತಾನು ಮಹಾರಾಷ್ಟ್ರದಲ್ಲಿ ಪಂದ್ಯಕ್ಕಾಗಿ 30 ಕೋಟಿ ರೂ.ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಳಾಂತರಿಸದಂತೆ ನ್ಯಾಯಾಲಯಕ್ಕೆ ಮನವಿ ಮಾಡಿತು. ನ್ಯಾಯಾಲಯದ ತೀರ್ಪಿನ ಬಿಸಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್‌ಗೆ ತಟ್ಟಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ನಾಗ್ಪುರ ಸ್ಟೇಡಿಯಂನ್ನು ತವರು ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಚಿಸಿತ್ತು.







