ಶಿವಮೊಗ್ಗ ನಗರದಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ
ಹೆಚ್ಚುತ್ತಿರುವ ಬಿಸಿಲ ತಾಪಕ್ಕೆ ನಾಗರಿಕರು ತತ್ತರ
ಶಿವಮೊಗ್ಗ,ಎ.13:‘ಮಲೆನಾಡ ನಗರಿ’ ಖ್ಯಾತಿಯ ಶಿವಮೊಗ್ಗ ಇದೀಗ ಅಕ್ಷರಶಃ ಕಾದ ಕಾವಲಿ ಯಂತಾಗಿದೆ. ರಣ ಬಿಸಿಲಿನ ತಾಪಕ್ಕೆ ಮಲೆನಾಡಿಗರು ತತ್ತರಿಸಿ ಹೋಗಿದ್ದಾರೆ. ಪ್ರಸ್ತುತ ನಗರದಲ್ಲಿ ಮನೆ ಮಾಡಿರುವ ಬಿಸಿಲ ವಾತಾವರಣ ಬಯಲು ಸೀಮೆ ಪ್ರದೇಶಗಳ ಅನುಭವ ಉಂಟು ಮಾಡುತ್ತಿದ್ದು, ಬಿಸಿಲ ಝಳಕ್ಕೆ ನಾಗರಿಕರು ಏದುಸಿರು ಬಿಡುವಂತಾಗಿದೆ. ಹವಾಮಾನ ಇಲಾಖೆಯ ಮೂಲಗಳ ಮಾಹಿತಿಯ ಪ್ರಕಾರ, ಬುಧವಾರ ನಗರದಲ್ಲಿ ದಾಖಲಾದ ಉಷ್ಣಾಂಶದ ಪ್ರಮಾಣ 41.50 ಡಿಗ್ರಿ ಸೆಲ್ಸಿಯಸ್! ಕಳೆದ ಕೆಲ ದಿನಗಳಿಂದ ಇದೇ ಪ್ರಮಾಣದ ಉಷ್ಣಾಂಶ ನಗರದಲ್ಲಿ ದಾಖಲಾಗುತ್ತಿದೆ. ಮತ್ತೊಂದೆಡೆ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುಗತಿಯಲ್ಲಿ ಸಾಗುತ್ತಿದೆ. ಇದು ನಾಗರಿಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.
ಇತ್ತೀಚಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಪ್ರಸ್ತುತ ಬೇಸಿಗೆ ಶಿವಮೊಗ್ಗ ನಾಗರಿಕರ ಪಾಲಿಗೆ ಕರಾಳವಾಗಿ ಪರಿಣಮಿಸುತ್ತಿದೆ. ದಾಖಲೆಯ ಮಟ್ಟದಲ್ಲಿ ತಾಪಮಾನ ದಾಖಲಾಗುತ್ತಿದೆ. ಬಿಸಿಲ ತಾಪ ಜೋರಾಗಿದ್ದು, ಇದು ನಾಗರಿಕರ ನೆಮ್ಮದಿ ಕೆಡುವುದರ ಜೊತೆಗೆ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುವಂತೆ ಮಾಡಿದೆ. ಈ ಬಾರಿಯ ಬೇಸಿಗೆಯಲ್ಲಿ ಕಂಡುಬರುತ್ತಿರುವ ಬಿಸಿಲು ಅನುಭವ ಈ ಹಿಂದಿನ ವರ್ಷಗಳಲ್ಲಿ ನೋಡಿರಲಿಲ್ಲ. ಮಧ್ಯಾಹ್ನದ ವೇಳೆ ಮನೆಯಲ್ಲಿರಲು ಆಗುತ್ತಿಲ್ಲ, ಹೊರಬರಲು ಸಾಧ್ಯವಾಗುತ್ತಿಲ್ಲ. ಬೇಗೆಯ ಅನುಭವ ಉಂಟಾಗುತ್ತಿದೆ. ಮನೆಯಲ್ಲಿರುವ ವಯೋವೃದ್ಧರು, ಮಕ್ಕಳ ಪಾಡಂತೂ ಹೇಳತೀರದಾಗಿದೆ. ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿದೆ ಎಂದು ವಿನೋಬ ನಗರ ಬಡಾವಣೆಯ ನಿವಾಸಿ ಮಂಜುನಾಥ್ ಎಂಬವರು ಅಭಿಪ್ರಾಯಪಡುತ್ತಾರೆ. ವಿರಳ: ಮಧ್ಯಾಹ್ನದ ವೇಳೆ ನಗರದ ಡಾಂಬರು ರಸ್ತೆಗಳಲ್ಲಿ ಬರಿಗಾಲಲ್ಲಿ ಓಡಾಡಲು ಆಗದ ಮಟ್ಟಕ್ಕೆ ಬಿಸಿಲ ತಾಪವಿರುತ್ತದೆ. ನೆತ್ತಿ ಸುಡುವ ರೀತಿಯಲ್ಲಿ ಬಿಸಿಲ ಝಳ ಕಂಡುಬರುತ್ತದೆ. ಬಿಸಿಲ ತಾಪದ ಕಾರಣದಿಂದಲೇ ಮಧ್ಯಾಹ್ನದ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಜನ-ವಾಹನ ಸಂಚಾರ ವಿರಳವಾಗಿರುವುದು ಕಂಡುಬರುತ್ತಿದೆ. ವ್ಯಾಪಾರ-ವಹಿವಾಟು ಕೂಡ ಕಡಿಮೆಯಿರುತ್ತದೆ. ಮುಂದಿನ ದಿನಗಳಲ್ಲಿ ನಗರದ ತಾಪಮಾನದ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆಯ ಮೂಲಗಳು ಹೇಳುತ್ತಿದ್ದು, ಇದು ನಗರದ ನಾಗರಿಕರ ನಿದ್ದೆಗೆಡುವಂತೆ ಮಾಡಿದೆ. ಒಟ್ಟಾರೆ ಪ್ರಸ್ತುತ ಬೇಸಿಗೆಯ ಬಿಸಿಲು ಮಲೆನಾಡಿಗರನ್ನು ಇನ್ನಿಲ್ಲದಂತೆ ಕಾಡುತ್ತಿರುವುದಂತೂ ಸತ್ಯವಾಗಿದೆ.
*ಮಲೆನಾಡ ಪ್ರದೇಶಗಳಲ್ಲಿಯೂ ಕೆಂಡದಂತ ಬಿಸಿಲು
ಪಶ್ಚಿಮಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿಯೂ ಪ್ರಸ್ತುತ ವರ್ಷ ಬಿರು ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ತಾಪಮಾನದ ಕಾರಣದಿಂದ ಈ ಪ್ರದೇಶಗಳ ಕೆರೆಕಟ್ಟೆಗಳು ಬರಿದಾಗುತ್ತಿವೆ. ಅಂತರ್ಜಲದ ಪ್ರಮಾಣ ಕುಸಿಯುತ್ತಿದೆ. ಇದರಿಂದ ಈ ತಾಲೂಕುಗಳ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕ ಉಂಟಾಗಿದೆ.







