ದಲಿತ ಸಂಘರ್ಷ ಸಮಿತಿಯಿಂದ ಖಂಡನೆ
ನಗರಸಭೆ ಉದ್ಯಾನವನದಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ
.jpg)
ಸಾಗರ, ಎ. 13: ನಗರಸಭೆ ಎದುರಿನ ಉದ್ಯಾನವನದ ಗಾಂಧಿ ಪ್ರತಿಮೆ ಪಕ್ಕದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಮುಂದಾಗಿರುವ ನಗರಸಭೆ ಆಡಳಿತದ ಕ್ರಮವನ್ನು ಖಂಡಿಸಿ, ಮಂಗಳವಾರ ರಾತ್ರಿಯಿಂದ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ವತಿಯಿಂದ ನಗರಸಭೆ ಎದುರು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ತಾಲೂಕು ಸಂಚಾಲಕ ನಾಗರಾಜ್ ಮಾತನಾಡಿ, 2008ರಿಂದಲೂ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುವ ಕುರಿತು ನಮ್ಮ ಸಮಿತಿ ಒತ್ತಾಯ ಮಾಡುತ್ತಾ ಬಂದಿದೆ. ಹಿಂದಿನ ಬಿಜೆಪಿ ನಗರಸಭೆ ಆಡಳಿತ ಅವಧಿಯಲ್ಲಿ ಪುತ್ಥಳಿ ಅನಾವರಣಕ್ಕಾಗಿ ಹಣ ಮೀಸಲಾಗಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯು ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಅನಾವರಣ ಮಾಡುವಂತೆ ಒತ್ತಾಯಿಸಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಆಡಳಿತವು ನಗರಸಭೆ ಎದುರಿನ ಉದ್ಯಾನವನದಲ್ಲಿ ಏಕಾಏಕಿ ಯಾರಿಗೂ ಸರಿಯಾದ ಮಾಹಿತಿ ನೀಡದೆ ಮೂಲೆಯಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಮುಂದಾಗಿರುವ ಕ್ರಮ ಖಂಡನೀಯ. ಇದು ದಲಿತ ಸಮುದಾಯಕ್ಕೆ ಹಾಗೂ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಪುತ್ಥಳಿ ನಿರ್ಮಾಣ ಮಾಡಬೇಕು. ಇಲ್ಲವಾದರೆ ನಮ್ಮ ಸಮಿತಿ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ದಸಂಸ ಜಿಲ್ಲಾ ಮುಖಂಡ ಪರಮೇಶ್ವರ ದೂಗೂರು ಮಾತನಾಡಿದರು. ದಸಂಸ ಪ್ರಮುಖರಾದ ಚೌಡಪ್ಪ, ಧರ್ಮಣ್ಣ, ರೇವಪ್ಪ ಕೆ.ಹೊಸಕೊಪ್ಪ, ಅಣ್ಣಪ್ಪ ಬಾಳೆಗುಂಡಿ, ಸುಭಾಷ್ ಕೌತಳ್ಳಿ, ಗುತ್ಯಪ್ಪ ಮಾವಿನಸರ ಉಪಸ್ಥಿತರಿದ್ದರು.







