ಸುಳ್ಯದ ಶಾರಿಕ್ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ

ಸುಳ್ಯ ಎ. 13: ಸುಳ್ಯದ 110 ಕೆವಿ ಸಬ್‌ಸ್ಟೇಷನ್ ನಿರ್ಮಾಣ ವಿಳಂಬ ಕುರಿತು ಸುಳ್ಯದ ಸಾಮಾಜಿಕ ಕಾರ್ಯಕರ್ತ, ಆರ್‌ಟಿಐ ಹೋರಾಟಗಾರ ಹಾಗೂ ಆಮ್ ಆದ್ಮಿ ಪಾರ್ಟಿಯ ಕ್ಷೇತ್ರ ಕಾರ್ಯದರ್ಶಿ ಡಿ.ಎಂ.ಶಾರಿಕ್ ಮಾ.21ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬರೆದ ಮನವಿ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರಕಿದೆ. ದೂರಿನ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವ ಮಾಹಿತಿ ಎ.12ರಂದು ಹಿಂಬರಹದ ಮೂಲಕ ದೊರೆತಿದೆ.
ಶಾರಿಕ್ ತನ್ನ ಮನವಿ ಪತ್ರದಲ್ಲಿ, ಯೋಜನೆ ಮಂಜೂರಾಗಿ ಹದಿನಾರು ವರ್ಷ ಕಳೆದರೂ ಲೈನ್ ಹಾದು ಹೋಗುವ ಮಾರ್ಗದಲ್ಲಿ ಕೃಷಿಕರ ಆಕ್ಷೇಪದಿಂದ ಯೋಜನೆ ಸ್ಥಗಿತಗೊಂಡಿದೆ. ಅದಲ್ಲದೆ ಪರ್ಯಾಯ ವ್ಯವಸ್ಥೆ ಇಲ್ಲದೆ ತಾಲೂಕು ಕತ್ತಲ ಕೂಪದಲ್ಲಿ ದಿನ ಕಳೆಯುತ್ತಿದೆ. ತಾಲೂಕಿನಲ್ಲಿ 40,000ಕ್ಕೂ ಅಧಿಕ ವಿದ್ಯುತ್ ಬಳಕೆದಾರರಿದ್ದು, 9,000ಕ್ಕೂ ಅಧಿಕ ಜನರು ಕೃಷಿಗೆ ವಿದ್ಯುತ್ ಆಧಾರಿತ ಪಂಪ್ ಸೆಟ್‌ನ್ನು ಅವಲಂಬಿಸಿದ್ದಾರೆ. ಲೋ ವೋಲ್ಟೇಜ್‌ನಿಂದಾಗಿ ಕೃಷಿ ತೋಟಕ್ಕೆ ನೀರಿಲ್ಲ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗಿದೆ. ಆಷ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಸ್ಯೆ ಉಂಟಾಗಿದೆ ಎಂದು ಪ್ರಧಾನಿಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದರು.
ಶಾರಿಕ್ ಹೋರಾಟಕ್ಕೆ ಬೆಂಬಲ
ಆರ್‌ಟಿಐ ಕಾರ್ಯಕರ್ತ ಡಿ.ಎಂ.ಶಾರಿಕ್ ಹಲವಾರು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕ ಹಿತಾಶಕ್ತಿಯ ಯೋಜನೆಗಳಿಗೆ ಬೇಕಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಈ ಹಿಂದೆ, ರಾಜ್ಯ ಹೆದ್ದಾರಿ 88ರ ವಿಸ್ತರಣೆ ಕಾಮಗಾರಿಗಾಗಿ ಸರಕಾರ ಸ್ವಾಧಿನಪಡಿಸಿದ ಜಮೀನಿನ ಸೂಕ್ತ ಪರಿಹಾರ ನೀಡದ ಕಾರಣಕ್ಕೆ ಪುತ್ತೂರು ಸಹಾಯಕ ಕಮಿಷನರ್ ಮತ್ತು ಕೆಆರ್‌ಡಿಸಿಎಲ್‌ನ ಡಿವಿಜನಲ್ ಎಂಜಿನಿಯರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ವಿಚಾರಣೆ ಬಳಿಕ ಜಮೀನು ಕಳಕೊಂಡ ಮಾಲಕರಿಗೆ 5.49 ಕೋಟಿ ರೂ. ಪರಿಹಾರ ಪಾವತಿಸಲಾಗಿತ್ತು. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಕಷ್ಟ, ಒಳಾಂಗಣ ಕ್ರೀಡಾಂಗಣ ಕಾಮಗಾರಿ ಸ್ಥಗಿತ, ಪೈಂಬಚ್ಚಾಲ್ ರಸ್ತೆ ಅವ್ಯವಸ್ಥೆ ಮುಂತಾದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಸಾರ್ವಜನಿಕ ಹೋರಾಟಕ್ಕೆ ಸಹಕಾರ ನೀಡಿದ್ದಾರೆ. ಶಾರಿಕ್ ಅವರ ಹೋರಾಟಕ್ಕೆ ಪಕ್ಷ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುತ್ತದೆ ಎಂದು ಪ್ರಕಟನೆ ತಿಳಿಸಿದೆ.







