ಚೀನಾ-ಪಾಕ್ ಕಾರಿಡಾರ್ ದುರ್ಬಲಗೊಳಿಸಲು ಭಾರತ ಯತ್ನ
ಪಾಕ್ ಸೇನಾ ಮುಖ್ಯಸ್ಥ ಆರೋಪ
ಗ್ವಾಡರ್ (ಪಾಕಿಸ್ತಾನ), ಎ. 13: ಚೀನಾದ ಪಶ್ಚಿಮ ವಲಯಗಳಿಂದ ಪಾಕಿಸ್ತಾನದ ಗ್ವಾಡರ್ ಬಂದರಿಗೆ ಸರಕುಗಳನ್ನು ಸಾಗಿಸುವುದಕ್ಕಾಗಿ ನಿರ್ಮಿಸಲಾಗುತ್ತಿರುವ ಆರ್ಥಿಕ ಕಾರಿಡಾರ್‌ನ್ನು ದುರ್ಬಲಗೊಳಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಾಹಿಲ್ ಶರೀಫ್ ಮಂಗಳವಾರ ಆರೋಪಿಸಿದ್ದಾರೆ.
ಈ ಯೋಜನೆಯಲ್ಲಿ ಚೀನಾ 46 ಬಿಲಿಯ ಡಾಲರ್ (ಸುಮಾರು 3.06 ಲಕ್ಷ ರೂಪಾಯಿ) ಹೂಡಿಕೆ ಮಾಡುತ್ತಿದೆ. ‘‘ನಮ್ಮ ನೆರೆ ದೇಶ ಭಾರತವು ಈ ಅಭಿವೃದ್ಧಿ ಯೋಜನೆಯನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದೆ ಎಂಬುದನ್ನು ನಾನು ಹೇಳಬೇಕಾಗಿದೆ’’ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಜನರಲ್ ರಾಹಿಲ್ ಶರೀಫ್ ಹೇಳಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗುತ್ತಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ನಿರ್ಮಾಣ ಮತ್ತು ಅದರಲ್ಲಿ ನಡೆಸುತ್ತಿರುವ ಹೂಡಿಕೆಯ ವಿರುದ್ಧ ಭಾರತ ಚೀನಾಕ್ಕೆ ತನ್ನ ಸ್ಪಷ್ಟ ಆಕ್ಷೇಪಗಳನ್ನು ಹಲವು ಬಾರಿ ವ್ಯಕ್ತಪಡಿಸಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಬೀಜಿಂಗ್‌ಗೆ ಭೇಟಿ ನೀಡುವುದಕ್ಕಿಂತ ಮುಂಚೆಯೂ ಒಮ್ಮೆ ಆಕ್ಷೇಪವನ್ನು ವ್ಯಕ್ತಪಡಿಸಲಾಗಿತ್ತು.ಕಾರಿಡಾರ್ ಆರ್ಥಿಕ ಯೋಜನೆ ಎಂದು ಹೇಳಿ ಭಾರತದ ಆಕ್ಷೇಪವನ್ನು ಚೀನಾ ತಳ್ಳಿಹಾಕಿತ್ತು.





