ನಿರ್ಗತಿಕರ ಏಳಿಗೆಗೆ ಶ್ರಮಿಸದ ಕೇಂದ್ರ: ದಿಗ್ವಿಜಯ್‌ಸಿಂಗ್

ಬೆಂಗಳೂರು, ಎ.13: ಕೇಂದ್ರ ಸರಕಾರ ಬಡವರ ಹಾಗೂ ಶೋಷಿತರ ಏಳಿಗೆಗೆ ಶ್ರಮಿಸದೇ, ವಿರುದ್ಧವಾಗಿ ನಡೆದು ಕೊಳ್ಳುತ್ತಿದೆ ಎಂದು ರಾಜ್ಯ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಹೇಳಿದ್ದಾರೆ. ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ಆಯೋ ಜಿಸಿದ್ದ ಅಂಬೇಡ್ಕರ್ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಭಾರತದಲ್ಲಷ್ಟೇ ಅಲ್ಲದೆ ವಿಶ್ವದ ಎಲ್ಲ ಬಡವರ ಹಾಗೂ ಕೆಳವರ್ಗದವರ ಧ್ವನಿಯಾಗಿದ್ದರು. ಆದರೆ, ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಿದರು. ರಾಜ್ಯ ಸರಕಾರ ರಾಜ್ಯದಲ್ಲಿ ಜಾತಿ ಜನಗಣತಿಯನ್ನು ಮಾಡಿ ಶೋಷಿಸಿತ ಸಮುದಾಯಗಳಿಗೆ ಅನುದಾನವನ್ನು ಮೀಸಲಿಟ್ಟು ಆ ಹಣ ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸಲು ಸೂಚನೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಂಬೇಡ್ಕರ್ ಅವರು ನವ ಭಾರತದ ಶಿಲ್ಪಿಯಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವರ್ಷಪೂರ್ತಿ ಅಂಬೇಡ್ಕರ್ ಅವರ ವರ್ಷಾಚರಣೆ ಆಚರಿಸಲು ಕರೆ ನೀಡಿದ್ದಾರೆ. ಅಲ್ಲದೆ, ಶಿಕ್ಷಣ ಹಾಗೂ ಬದುಕಿನಿಂದ ವಂಚಿತರಾಗಿ ಜೀತಪದ್ಧತಿಯಿಂದ ನಲುಗುತ್ತಿದ್ದ ಬಡವರ ಏಳಿಗೆಗೆ ಅಂಬೇಡ್ಕರ್ ಅವರು ಆದ್ಯತೆ ನೀಡಿದ್ದರು ಎಂದು ಹೇಳಿದರು. ಕಾಂಗ್ರೆಸ್ ಸಂಸದೀಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಲೋಕಸಭೆಯಂತೆ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತ ಸಿಕ್ಕರೆ ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರಧಾನಿ ಮೋದಿಗೆ, ಬಿಜೆಪಿಗೆ ಚುನಾವಣಾ ಸಂದರ್ಭದಲ್ಲಿ ಅಂಬೇಡ್ಕರ್ ಅವರು ನೆನಪಾಗುತ್ತಾರೆ. ಆದರೆ, ಉಳಿದ ದಿನಗಳಲ್ಲಿ ಅವರು ನೆನಪಾಗುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತ ಸಿಕ್ಕರೆ ಮೀಸಲಾತಿ ರದ್ದಾಗುವುದರಲ್ಲಿ ಆಶ್ಚರ್ಯವಿಲ್ಲ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಜಿ. ಪರಮೇಶ್ವರ್, ರೋಷನ್‌ಬೇಗ್, ಡಿ.ಕೆ.ಶಿವಕುಮಾರ್, ಎಚ್.ಸಿ.ಮಹದೇವಪ್ಪ, ಆಂಜನೇಯ, ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್, ಶಿವರಾಜ್ ತಂಗಡಗಿ, ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಮುಖಂಡರಾದ ಜಾಫರ್ ಷರೀಫ್, ಎಂ.ವಿ.ರಾಜಶೇಖರನ್, ಹನುಮಂತಪ್ಪ, ಚಂದ್ರಪ್ಪ, ಅಲ್ಲಂ ವೀರಭದ್ರಪ್ಪ, ಸಾಹಿತಿ ಬರಗೂರು ರಾಮಚಂದ್ರಪ್ಪ, ಚಿಂತಕ ನಟರಾಜ್ ಹುಳಿಯಾರ್ ಮತ್ತಿತರರು ಉಪಸ್ಥಿತರಿದ್ದರು.





