‘ಸುಪ್ರೀಂ’ ಮೊರೆ ಹೋಗಲು ಸರಕಾರ ನಿರ್ಧಾರ?
ಬಿಎಸ್‌ವೈ ವಿರುದ್ಧದ ಪ್ರಕರಣಗಳು
ಬೆಂಗಳೂರು, ಎ.13: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ, ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ದಾಖಲಾಗಿದ್ದ ವಿವಿಧ ಪ್ರಕರಣಗಳನ್ನು ರದ್ದುಗೊಳಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ರಾಜ್ಯ ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.
ಹೈಕೋರ್ಟ್‌ನಲ್ಲಿ ಪ್ರಕರಣಗಳು ರದ್ದಾಗಿದ್ದರೂ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸದಿದ್ದರೆ ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನೆಯಾಗಬಹುದು ಎಂದು ಆತಂಕಕ್ಕೆ ಸರಕಾರ ಒಳಗಾಗಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ನ್ಯಾಯಾಲಯವೆ ಈ ಬಗ್ಗೆ ಸರಕಾರವನ್ನು ಪ್ರಶ್ನಿಸಬಹುದು ಅಥವಾ ದೂರುದಾರರು ಸರಕಾರದ ಕ್ರಮವನ್ನು ಪ್ರಶ್ನಿಸಬಹುದಾಗಿದೆ ಎಂದು ಕಾನೂನು ಇಲಾಖೆ ನೀಡಿರುವ ಸಲಹೆಯನ್ನು ಆಧರಿಸಿ ಸರಕಾರ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಬಿಎಸ್‌ವೈಗೆ ಸಂಕಷ್ಟ: ರಾಜ್ಯ ಸರಕಾರವು ಯಡಿಯೂರಪ್ಪ ವಿರುದ್ಧದ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಂತಸದಲ್ಲಿರುವ ಅವರಿಗೆ ಮತ್ತೆ ಸಂಕಷ್ಟಗಳು ಎದುರಾಗುವಂತಾಗುತ್ತದೆ.
ಮೇಲ್ಮನವಿಗೆ ಬಗ್ಗೆ ಚಿಂತನೆ ನಡೆಸಿಲ್ಲ: ಯಡಿಯೂರಪ್ಪವಿರುದ್ಧ ಸುಪ್ರೀಂ ಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸುವ ಚಿಂತನೆಯನ್ನು ಸರಕಾರ ನಡೆಸಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಣೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವ ಸಂಬಂಧ ಖಾಸಗಿ ವ್ಯಕ್ತಿಜಗಳು ಕಾನೂನು ಇಲಾಖೆಯ ಸಲಹೆಯನ್ನು ಕೇಳಿದ್ದಾರೆ. ಅವರು ಮೇಲ್ಮನವಿ ಸಲ್ಲಿಸಿದರೆ ಸರಕಾರದ ಅಭ್ಯಂತರವೇನು ಇಲ್ಲ ಎಂದರು.
ಸೇಡಿನ ರಾಜಕಾರಣ
ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನು ನೇಮಕವಾದ ನಂತರ ಜನಸಾಮಾನ್ಯರಿಂದ ಬಂದಿರುವ ಪ್ರತಿಕ್ರಿಯೆಗಳನ್ನು ನೋಡಿ ಕಂಗೆಟ್ಟಿರುವ ರಾಜ್ಯ ಸರಕಾರವು, ಇದೀಗ ಸೇಡಿನ ರಾಜಕಾರಣ ಮಾಡಲು ಮುಂದಾಗಿದೆ.
ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ





