ಜಾರಿಗೆ ಆಗ್ರಹಿಸಿ ಎ.17ರಂದು ಉಪವಾಸ ಸತ್ಯಾಗ್ರಹ
‘ಜಿಲ್ಲಾ ರೆಗ್ಯುಲೇಟಿಂಗ್ ಆ್ಯಕ್ಟ್’
ಬೆಂಗಳೂರು, ಎ.13: ರಾಜ್ಯದಾದ್ಯಂತ ಶಾಲಾ ಕಾಲೇಜುಗಳಲ್ಲಿ ಪ್ರವೇಶಾತಿಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಕಾಲೇಜುಗಳಲ್ಲಿ ಡೊನೇಷನ್ ಹಾವಳಿಯನ್ನು ಹತ್ತಿಕ್ಕಲು ‘ಜಿಲ್ಲಾ ರೆಗ್ಯುಲೇಟಿಂಗ್ ಆ್ಯಕ್ಟ್’ ಜಾರಿ ಮಾಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿ ಪಾಲಕರ ಒಕ್ಕೂಟ ಎ.17ರಂದು ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾ ಗ್ರಹವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎಸ್‌ಎಫ್‌ಐ ಕಾರ್ಯದರ್ಶಿ ಗುರುರಾಜ್ ದೇಸಾಯಿ, ರಾಜ್ಯದಲ್ಲಿ ಶಿಕ್ಷಣ ಸಚಿವರು ಖಾಸಗಿ ಶಾಲೆಗಳ ಕೈಗೊಂಬೆಗಳಾಗಿದ್ದಾರೆ. ಕೋಟ್ಯಂತರ ರೂಪಾಯಿ ಗಳು ಹಣ ವಸೂಲಿ ಮಾಡುತ್ತಿದ್ದರೂ ಇದುವರೆಗೂ ಯಾರ ಮೇಲೂ ಸೂಕ್ತವಾದ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಯಾವುದೇ ಶಾಲಾ- ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸಬಾರದೆಂಬ ಸ್ವಷ್ಟವಾದ ಆದೇಶವಿದ್ದರೂ ಹಲವು ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ನಡೆಸಿ ದಾಖಲಾತಿ ನೀಡುತ್ತಿದ್ದಾರೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಏಕರೂಪ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕು, ಅನಧಿಕೃತ ಖಾಸಗಿ ಶಾಲೆ ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.





