ಸ್ಯಾನ್ ಬರ್ನಾಡಿನೊ ಉಗ್ರರ ಐಫೋನ್ ತೆರೆದದ್ದು ಹ್ಯಾಕರ್‌ಗಳು

ವಾಶಿಂಗ್ಟನ್, ಎ. 13: ಐಫೋನ್ ಸಾಫ್ಟ್‌ವೇರ್‌ನಲ್ಲಿನ ಕನಿಷ್ಠ ಒಂದು ದೋಷವನ್ನು ಗುರುತಿಸಿದ ವೃತ್ತಿಪರ ಹ್ಯಾಕರ್‌ಗಳು, ಸ್ಯಾನ್ ಬರ್ನಾಡಿನೊ ದಾಳಿಕೋರ ಬಳಸುತ್ತಿದ್ದ ಐಫೋನ್ ತೆರೆಯುವಲ್ಲಿ ಎಫ್‌ಬಿಐಗೆ ನೆರವು ನೀಡಿದರು ಎಂದು ‘ವಾಶಿಂಗ್ಟನ್ ಪೋಸ್ಟ್’ ಮಂಗಳವಾರ ವರದಿ ಮಾಡಿದೆ.
ಈ ಹ್ಯಾಕರ್‌ಗಳ ಸೇವೆಗಾಗಿ ಅವರಿಗೆ ಹಣ ನೀಡಲಾಗಿದೆ ಎಂದು ಪ್ರಕರಣದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಉಲ್ಲೇಖಿಸಿ ಪೋಸ್ಟ್ ಹೇಳಿದೆ.
ಸಾಫ್ಟ್‌ವೇರ್‌ನಲ್ಲಿನ ಲೋಪವನ್ನು ಬಳಸಿಕೊಂಡು ಹ್ಯಾಕರ್‌ಗಳು ಹಾರ್ಡ್‌ವೇರೊಂದನ್ನು ರೂಪಿಸಿದರು ಹಾಗೂ ಇದು ಐಫೋನ್‌ನ ನಾಲ್ಕು ಅಂಕಿಯ ವೈಯಕ್ತಿಕ ಗುರುತು ಸಂಖ್ಯೆಯನ್ನು ನಿವಾರಿಸಿಕೊಂಡು ಫೋನ್ ತೆರೆಯಲು ಅಧಿಕಾರಿಗಳಿಗೆ ಸಹಾಯ ಮಾಡಿತು ಹಾಗೂ ಈ ಪ್ರಕ್ರಿಯೆಯಲ್ಲಿ ಫೋನ್‌ನಲ್ಲಿರುವ ಎಲ್ಲ ಮಾಹಿತಿಯನ್ನು ಅಳಿಸಿಹಾಕುವ ಕ್ರಿಯೆಯೊಂದು ಚಾಲನೆಗೊಳ್ಳದಂತೆ ಅದುಮಿಡಲು ನೆರವಾಯಿತು.
ನಾಲ್ಕು ಅಂಕಿಗಳ ಪಿನ್ ಸಂಖ್ಯೆಯನ್ನು ಭೇದಿಸುವುದು ಎಫ್‌ಬಿಐಗೆ ಸಮಸ್ಯೆಯಾಗಿರಲಿಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ, 10 ಬಾರಿ ತಪ್ಪು ಪಿನ್ ಸಂಖ್ಯೆಯನ್ನು ಒತ್ತಿದರೆ ಫೋನ್‌ನಲ್ಲಿರುವ ಎಲ್ಲ ಮಾಹಿತಿಗಳನ್ನು ಅಳಿಸಿಹಾಕುವಂಥ ಕ್ರಿಯೆಯೊಂದು ಚಾಲನೆಗೊಳ್ಳುತ್ತದೆ. ಆ ಕ್ರಿಯೆಯನ್ನು ಅದುಮಿಡುವುದು ಎಫ್‌ಬಿಐಗೆ ಸಮಸ್ಯೆಯಾಗಿತ್ತು ಎಂದು ಪತ್ರಿಕೆ ಹೇಳಿದೆ.
ಅಮೆರಿಕದ ಸ್ಯಾನ್ ಬರ್ನಾಡಿನೊದಲ್ಲಿ ಕಳೆದ ವರ್ಷದ ಡಿಸೆಂಬರ್ 2ರಂದು ಸಯ್ಯದ್ ಫಾರೂಕ್ ಮತ್ತು ಆತನ ಹೆಂಡತಿ ತಶ್ಫೀನ್ ಮಲಿಕ್ ದಾಳಿ ನಡೆಸಿ 14 ಮಂದಿಯನ್ನು ಹತ್ಯೆ ಮಾಡಿದ್ದರು. ಬಳಿಕ ಇಬ್ಬರೂ ಪೊಲೀಸರು ಹಾರಿಸಿದ ಗುಂಡಿನಿಂದ ಪ್ರಾಣ ಕಳೆದುಕೊಂಡಿದ್ದರು. ಈ ಜೋಡಿಯದ್ದೆಂದು ಹೇಳಲಾದ ಇತರ ಎರಡು ಫೋನ್‌ಗಳು ದಾಳಿಯ ಬಳಿಕ ನಾಶ ಪಡಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಖಾಸಗಿತನದ ಉಲ್ಲಂಘನೆಯಾಗುತ್ತದೆ ಎಂದು ಹೇಳಿ ಉಗ್ರರ ಐಫೋನನ್ನು ತೆರೆಯಲು ನಿರ್ಮಾಪಕ ಆ್ಯಪಲ್ ಕಂಪೆನಿ ನಿರಾಕರಿಸಿತ್ತು.





