ನಗರಗಳಲ್ಲಿ ಹದಿಹರೆಯದವರ ಗರ್ಭಪಾತ ಅತ್ಯಧಿಕ
ಹೊಸದಿಲ್ಲಿ, ಎ.13: ದೇಶದ ನಗರ ಪ್ರದೇಶಗಳಲ್ಲಿ ದಾಖಲಾಗುತ್ತಿರುವ ಬಹುತೇಕ ಗರ್ಭಪಾತ ಪ್ರಕರಣಗಳು 20 ವರ್ಷಕ್ಕಿಂತ ಕೆಳ ವಯಸ್ಸಿನವರದ್ದು. ಇದು ನಗರ ಯುವತಿಯರಲ್ಲಿ ಲೈಂಗಿಕತೆ ಬಗ್ಗೆ ತೀರಾ ಲಘು ಭಾವನೆ ಹಾಗೂ ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನೋಭಾವವನ್ನು ಬಿಂಬಿಸುತ್ತದೆ ಎಂದು ಸರಕಾರದ ಆರೋಗ್ಯ ಸಮೀಕ್ಷೆ ತಿಳಿಸಿದೆ.
ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಎಸ್‌ಓ)ಯ ಅಧ್ಯಯನ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಶೇಕಡ 77ರಷ್ಟು ಗರ್ಭವತಿಯರು ಹಾಗೂ ನಗರ ಪ್ರದೇಶಗಳ ಶೇಕಡ 74ರಷ್ಟು ಗರ್ಭಿಣಿಯರು ಮಗುವಿಗೆ ಜನ್ಮ ನೀಡುತ್ತಾರೆ. ಗರ್ಭಪಾತ ಪ್ರಮಾಣ ನಗರಗಳಲ್ಲಿ ಶೇಕಡ 3ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಶೇಕಡ 2ರಷ್ಟು. ಆದರೆ ಆತಂಕಕಾರಿ ಅಂಶವೆಂದರೆ ಶೇಕಡ 14ರಷ್ಟು ಗರ್ಭಪಾತಗಳು 20ಕ್ಕಿಂತ ಕಡಿಮೆ ವಯೋಮಿತಿಯ ಯುವತಿಯರಲ್ಲಿ ಆಗುತ್ತಿದೆ. ಫಲಿಸದ ಗರ್ಭಧಾರಣೆ (ಪ್ರೆಗ್ನೆನ್ಸಿ ವೇಸ್ಟೇಜ್) ಪ್ರಮಾಣ ಕೂಡಾ ಈ ವಯೋಮಿತಿಯವರಲ್ಲಿ ಶೇಕಡ 21ರಷ್ಟಿದ್ದು, ಇದು ಅತ್ಯಧಿಕ. ಅಂದರೆ ಗರ್ಭ ಧರಿಸಿದ ಶೇಕಡ 21ರಷ್ಟು ಯುವತಿಯರು ಮಗುವಿಗೆ ಜನ್ಮ ನೀಡುವುದಿಲ್ಲ. ನಗರ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೌಕರ್ಯಗಳಿದ್ದರೂ, ಇಂಥ ಫಲಿಸದ ಗರ್ಭಧಾರಣೆ ಪ್ರಮಾಣ ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಅಧಿಕ ಎನ್ನುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.
ಗರ್ಭಪಾತದ ಬಗ್ಗೆ ವರದಿ ಮಾಡಲು ಹಿಂಜರಿಕೆ ಇಲ್ಲದಿರುವುದು. ಹೆಚ್ಚಿನ ಪ್ರಕರಣ, ಗರ್ಭಪಾತಕ್ಕೆ ಉತ್ತಮ ಸೌಕರ್ಯಗಳು ಇರುವುದು ಇದಕ್ಕೆ ಕಾರಣವಿರಬಹುದು. ಆದರೆ ನಿಖರ ಕಾರಣ ಪತ್ತೆ ಮಾಡಲು ಆಳವಾದ ಅಧ್ಯಯನ ಅಗತ್ಯ ಎಂದು ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 56ರಷ್ಟು ಹೆರಿಗೆ ಸರಕಾರಿ ಆಸ್ಪತ್ರೆಗಳಲ್ಲಾದರೆ, ಶೇಕಡ 24 ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತವೆ. ನಗರ ಪ್ರದೇಶದಲ್ಲಿ ಇದು ಕ್ರಮವಾಗಿ ಶೇಕಡ 42 ಹಾಗೂ 48ರಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 20 ಹಾಗೂ ನಗರ ಪ್ರದೇಶಗಳಲ್ಲಿ ಶೇಕಡ 11ರಷ್ಟು ಆಸ್ಪತ್ರೆಗಳಲ್ಲಿ ಆಗುತ್ತಿಲ್ಲ ಎಂಬ ಅಂಶವನ್ನು ಕೂಡಾ ಇದು ಬಹಿರಂಗಪಡಿಸಿದೆ.





