ಗುಜರಾತ್ ಸರಕಾರಕ್ಕೆ ಸಿಎಜಿ ಮಂಗಳಾರತಿ
ಜನತೆಗೆ ಬಾರದ ಅಚ್ಛೇ ದಿನ್, ಕೌಶಲ್ಯ ಯೋಜನೆಯೂ ವಿಫಲ
ಅಹಮದಾಬಾದ್ , ಎ.13: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗಪ್ರಾರಂಭಿಸಿದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲು ವಿಫಲವಾಗಿರುವ ಗುಜರಾತ್ ಸರಕಾರವನ್ನು ಸಿಎಜಿ ವರದಿ ತರಾಟೆಗೆ ತೆಗೆದುಕೊಂಡಿದೆ.
ಪ್ರತಿ ವರ್ಷ ಕನಿಷ್ಠ 4.75 ಲಕ್ಷ ಯುವಜನತೆಗೆ ಕೌಶಲ್ಯ ತರಬೇತಿ ನೀಡಿ ಅವರಿಗೆ ಉದ್ಯೋಗಾವಕಾಶಗಳನ್ನು ಈ ಯೋಜನೆಯಡಿಯಲ್ಲಿ ಕೊಡಬೇಕಾಗಿದ್ದರೂ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಯಶಸ್ವಿಯಾಗಿಲ್ಲ, ಎಂದು ವರದಿ ತಿಳಿಸಿದ್ದು ಇದಕ್ಕಾಗಿ ಆಡಳಿತ ವೈಫಲ್ಯ ಕಾರಣವೆಂದು ದೂರಿದೆ. ಸರಕಾರ ಈ ಯೋಜನೆ ಜಾರಿಗೆ ಸರಿಯಾದ ಕಾರ್ಯಯೋಜನೆಯನ್ನೂ ಹಾಕಿರಲಿಲ್ಲವೆಂದು ವರದಿ ಹೇಳಿದೆ.
ಗುಜರಾತ್ ಸ್ಕಿಲ್ ಡೆವಲಪ್‌ಮೆಂಟ್ ಮಿಷನ್ ಅನ್ವಯ ಸಮಾನ ನೀತಿಯೊಂದನ್ನು ಅಭಿವದ್ಧಿ ಪಡಿಸಲಾಗಿಲ್ಲವೆಂದೂ ದಾಖಲಾದ 1.63 ಅಭ್ಯರ್ಥಿಗಳಲ್ಲಿ ಕೇವಲ ಶೇ.37ಮಂದಿ ಅಪ್ರೆಂಟಿಸ್‌ಶಿಪ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆಂದೂ 2010-15ನೆ ಅವಧಿಯಲ್ಲಿ ಅಪ್ರೆಂಟಿಸ್‌ಗಳ ಶೇ. 25 ಸೀಟುಗಳು ಖಾಲಿಯಾಗಿದ್ದವೆಂದೂ ವರದಿ ತಿಳಿಸಿದೆ. ಮೇಲಾಗಿ ಪ್ರಸ್ತಾಪಿಸಲಾದ ಒಟ್ಟು 200 ಸ್ಕಿಲ್ ಅಪ್‌ಗ್ರೇಡೇಶನ್ ಕೇಂದ್ರಗಳಲ್ಲಿಕೇವಲ 39 ಕೇಂದ್ರಗಳನ್ನು ಸೆಂಟರ್ ಫಾರ್ ಎಂಟ್ರಪ್ರನರ್‌ಶಿಪ್‌ಡೆವಲಪ್‌ಮೆಂಟ್ ಸ್ಥಾಪಿಸಿದೆಯೆಂದೂ ಮಾರ್ಚ್ 2015ರ ತನಕ ಕೇವಲ 0.14 ಲಕ್ಷ ಅಭ್ಯರ್ಥಿಗಳನ್ನು ತರಬೇತುಗೊಳಿಸಲಾಗಿದೆಯೆಂದೂ ಹೇಳಲಾಗಿದೆ. ಸಂತ ಶ್ರೀ ರವಿದಾಸ ಹೈಸ್ಕೂಲ್ ತರಬೇತಿ ಕಾರ್ಯಕ್ರಮದಡಿಯಲ್ಲಿ 47,140 ಜನರಿಗೆ ತರಬೇತಿ ನೀಡಬೇಕಾಗಿದ್ದರೂ ಕೇವಲ 17,052 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು ಅವರಲ್ಲಿ ಶೇ.30 ಮಹಿಳಾ ಅಭ್ಯರ್ಥಿಗಳಿರಬೇಕಾಗಿದ್ದರೆ ವಾಸ್ತವವಾಗಿ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಕೇವಲ ಶೇ.18 ಮಂದಿ ಮಹಿಳೆಯರಾಗಿದ್ದರು, ಎಂದು ವರದಿ ಉಲ್ಲೇಖಿಸಿದೆ. ಸಂಬಂಧಿತ ವೆಬ್ ತಾಣದಲ್ಲಿ ಈ ಯೋಜನೆಯಂಗವಾಗಿರುವ ಮೂರು ಕಾರ್ಯಕ್ರಮಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳ ಅಂಕಿಸಂಖ್ಯೆಗಳನ್ನು ಪರಿಶೀಲಿಸಲಾಗಿ ಅದೇ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಯೋಜನೆಯಡಿ ತರಬೇತಿ ಪಡೆದಿರುವ ಬಗ್ಗೆ ತಿಳಿಯುತ್ತದೆ ಹಾಗೂ ಇದರಿಂದ ಒಟ್ಟು 4.58 ಲಕ್ಷ ಅಭ್ಯರ್ಥಿಗಳು ತರಬೇತಿ ಹೊಂದಿದ್ದಾರೆಂಬುದು ಉತ್ಪ್ರೇಕ್ಷಿತ ಸಂಖ್ಯೆಯಾಗುತ್ತದೆ, ಎಂದು ವರದಿ ಹೇಳಿದೆ. ಮೇಲಾಗಿ ಉದ್ಯೋಗ ಪಡೆದವರಲ್ಲಿ ಶೇ.44 ಮಂದಿಗೆ ನಿಗದಿತ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ದೊರಕಿದೆಯೆಂದು ವರದಿ ತಿಳಿಸುತ್ತದೆ.







