ಕೃತಿಚೌರ್ಯಕ್ಕಾಗಿ ಕ್ಷಮಾಪಣೆ ಸಲ್ಲಿಸಲಿರುವ ಅಪ್ಪಾ ರಾವ್ ಹಾಗೂ ಸಹಲೇಖಕರು
ಹೈದರಾಬಾದ್, ಎ.13: ಕೃತಿಚೌರ್ಯ ಆರೋಪವೆದುರಿಸುತ್ತಿರುವ ಹೈದರಾಬಾದ್ ವಿಶ್ವವಿದ್ಯಾನಿಲಯದ ಉಪಕುಲಪತಿ ಅಪ್ಪಾ ರಾವ್ ಪೊಡಿಲೆ ಅವರು ಸಲ್ಲಿಸಿರುವ ಕ್ಷಮಾಪಣೆಯನ್ನು ಮುಂದಿನ ತಿಂಗಳು ಪ್ರಕಟವಾಗಲಿರುವ ಪ್ರೊಸೀಡಿಂಗ್ಸ್ ಆಫ್ ದಿ ಇಂಡಿಯನ್ ನ್ಯಾಷನಲ್ ಸಾಯನ್ಸ್ ಅಕಾಡಮಿ ಜರ್ನಲ್‌ನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದೆಂದು ಸಂಪಾದಕ ಸುಭಾಶ್ ಸಿ. ಲಕೋಟಿಯಾ ತಿಳಿಸಿದ್ದಾರೆಂದು ದಿ ವೈರ್ ವರದಿ ಮಾಡಿದೆ.
ದಿ ವೈರ್ ತನ್ನ ಎಪ್ರಿಲ್ 5ರ ವರದಿಯೊಂದರಲ್ಲಿ ಅಪ್ಪಾ ರಾವ್ ಅವರು ಸಹಲೇಖಕರಾಗಿರುವ ಮೂರು ಪ್ರಬಂಧಗಳಲ್ಲಿ ಕೃತಿಚೌರ್ಯ ನಡೆಸಲಾಗಿದೆಯೆಂದು ತಿಳಿಸಿತ್ತು.
ಸಂಪಾದಕ ಲಕೋಟಿಯಾ ದಿ ವೈರ್‌ಗೆ ಕಳುಹಿಸಿದ ಇಮೇಲ್ ಸಂದೇಶದಲ್ಲಿ ಕೃತಿ ಚೌರ್ಯದ ಬಗ್ಗೆ ತಮ್ಮನ್ನು ಎಚ್ಚರಿಸಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ನಾವು ಪ್ರಕರಣವನ್ನು ಪರಿಶೀಲಿಸಿ ಲೇಖಕರನ್ನು ಸಂಪರ್ಕಿಸಿದ್ದೇವೆ ಎಂದೂ ಅವರು ತಿಳಿಸಿದ್ದಾರೆ. ‘ರೂಟ್ ಕೊಲೊನೈಝೇಶನ್ ಎಂಡ್ ಖೋರಂ ಸೆನ್ಸಿಂಗ್ ಆರ್ ದಿ ಡ್ರೈವಿಂಗ್ ಫೋರ್ಸಸ್ ಆಫ್ ಪ್ಲಾಂಟ್‌ಗ್ರೋತ್ ಪ್ರಮೋಟಿಂಗ್ ರೈಝೋಬ್ಯಾಕ್ಟೀರಿಯಾ ಫಾರ್ ಗ್ರೋತ್ ಪ್ರಮೋಶನ್’ ಎಂಬ ಪ್ರಬಂಧ ಜೂನ್ 2014ರಲ್ಲಿ ಪ್ರಕಟವಾಗಿತ್ತು. ಕೃತಿಚೌರ್ಯವಾಗಿದೆಯೆಂಬ ವೈರ್ ವರದಿಗೆ ಪ್ರತಿಕ್ರಿಯಿಸಿದ ಅಪ್ಪಾ ರಾವ್ ‘‘ನಾವು ಮೂಲ ದಾಖಲೆಯನ್ನು ರೆಫರೆನ್ಸ್ ವಿಭಾಗದಲ್ಲಿ ಉಲ್ಲೇಖಿಸಲು ಮರೆತಿದ್ದರೆ ನಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸುತ್ತೇವೆ,’’ಎಂದಿದ್ದರು.
ಪ್ರಬಂಧವನ್ನು ಪ್ರಕಟಿಸುವ ಮೊದಲು ಕೃತಿಚೌರ್ಯ ಪತ್ತೆ ಹಚ್ಚುವ ಯಾವುದೇ ಸಾಧನವನ್ನು ಬಳಸದೇ ಇರುವುದನ್ನು ಅಪ್ಪಾರಾವ್ ಹಾಗೂ ಲಖೋಟಿಯಾ ಇಬ್ಬರೂ ಒಪ್ಪಿಕೊಂಡಿದ್ದಾರೆ.





