ಮಾಹಿತಿ- ಪ್ರಸಾರ ಖಾತೆ ಕಾರ್ಯದರ್ಶಿಗೆ ಪತ್ರಿಕಾ ಮಂಡಳಿ ವಾರಂಟ್!

ಹೊಸದಿಲ್ಲಿ, ಎ.13: ದಿಢೀರ್ ಬೆಳವಣಿಗೆಯೊಂದರಲ್ಲಿ ಭಾರತೀಯ ಪತ್ರಿಕಾ ಮಂಡಳಿ, ಸರ್ವಾನುಮತದ ನಿರ್ಧಾರ ಕೈಗೊಂಡು ಮಾಹಿತಿ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಸುನೀಲ್ ಅರೋರಾ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಜತೆಗೆ ಸರಕಾರ ಹಾಗೂ ಮಂಡಳಿ ನಡುವಿನ ಸಂಘರ್ಷಕ್ಕೆ ಕಿಚ್ಚು ಹಚ್ಚಿದೆ.
ಈ ನೋಟಿಸ್ ನೀಡಲು ಕಾರಣ ವಿವರಿಸಿದ ಪತ್ರಿಕಾ ಮಂಡಳಿ ಅಧ್ಯಕ್ಷ ಚಂದ್ರಮೌಳಿ ಕುಮಾರ್ ಪ್ರಸಾದ್, ಪತ್ರಿಕಾ ಮಂಡಳಿಯ ಸದಸ್ಯರ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದ ಮಂಡಳಿಯ ಅಧಿಕಾರವನ್ನು ಅರೋರಾ ಪ್ರಶ್ನಿಸಿದ್ದಾರೆ ಎಂದರು.
ಮಂಡಳಿ ಅಂಥ ಗಂಭೀರ ಕ್ರಮಕ್ಕೆ ಮುಂದಾದ ಬಗ್ಗೆ ಕೇಳಿದ ನಿರ್ದಿಷ್ಟ ಪ್ರಶ್ನೆಗೆ, ಇದು ಎಪ್ರಿಲ್ 11ರ ಸಭೆಯಲ್ಲಿ ಭಾಗವಹಿಸಿದ ಮಂಡಳಿಯ ಎಲ್ಲ 18 ಮಂದಿ ಸದಸ್ಯರ ಸರ್ವಾನುಮತದ ನಿರ್ಣಯ. ಹಲವು ವಿಷಯಗಳ ಬಗ್ಗೆ ಚರ್ಚಿಸುವ ಸಲುವಾಗಿ, ಈ ಸಭೆಗೆ ಹಾಜರಾಗುವಂತೆ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದೆವು. ಅವರು ಹಾಜರಾಗಲಿಲ್ಲ ಮಾತ್ರವಲ್ಲದೆ, ನೋಟಿಸ್ ನೀಡುವ ಸಂಬಂಧ ಮಂಡಳಿಯ ಅಧಿಕಾರ ಹಾಗೂ ಕಾರ್ಯವ್ಯಾಪ್ತಿಯನ್ನೇ ಪ್ರಶ್ನಿಸಿದ್ದಾರೆ ಎಂದು ವಿವರಿಸಿದರು.
ಮಂಡಳಿಯ ಅಧಿಕಾರಗಳು, ಸ್ವಾಯತ್ತತೆ ಹಾಗೂ ಹಾಜರಾತಿ ಭತ್ತೆಯಂಥ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಸರಕಾರದ ಮೇಲಿನ ಅವಲಂಬನೆ ಕಡಿಮೆ ಮಾಡುವ ಸಲುವಾಗಿ ಪತ್ರಿಕೆಗಳ ಮೇಲೆ ವಿಧಿಸುವ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾಪವೂ ಇತ್ತು. ಪತ್ರಿಕೆಗಳ ಗಾತ್ರ, ಪ್ರಸಾರಸಂಖ್ಯೆಗೆ ಅನುಗುಣವಾಗಿ ಶುಲ್ಕ ನಿಗದಿಪಡಿಸಲು ನಿರ್ಧರಿಸಲಾಗಿತ್ತು. ಈ ಮೂಲಕ ಮಂಡಳಿ ವೆಚ್ಚ ಭರಿಸಿಕೊಳ್ಳುವ ಪ್ರಸ್ತಾವನೆ ಇತ್ತು. ಹಾಲಿ ಇರುವ ಸದಸ್ಯರ ಹಾಜರಾತಿ ಭತ್ತೆಯನ್ನು 300 ರೂಪಾಯಿಗಳಿಂದ 4 ಸಾವಿರ ರೂಪಾಯಿ ಹೆಚ್ಚಳಕ್ಕೆ ಮಂಡಳಿ ಸಲಹೆ ಮಾಡಿತ್ತು. ಸಚಿವಾಲಯ 1,000 ರೂಪಾಯಿ ಭತ್ಯೆ ನೀಡಲು ನಿರ್ಧರಿಸಿತ್ತು.
ನಿಮಗೆ ನೋಟಿಸ್ ತಲುಪಿದಾಗ ನೀವು ಹಾಜರಾಗಬೇಕು ಅಥವಾ ತಮ್ಮ ಪ್ರತಿನಿಧಿಯನ್ನು ಕಳುಹಿಸಬೇಕು. ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿಯೊಬ್ಬರು ಮಂಡಳಿಯನ್ನು ಕೇವಲವಾಗಿ ಪರಿಗಣಿಸಿರುವುದು ಖಂಡನೀಯ ಎಂದು ಸದಸ್ಯರೊಬ್ಬರು ಹೇಳಿದರು. ಈಗ ಹೊರಡಿಸಿರುವ ವಾರಂಟ್ ಪ್ರಕಾರ, ಅರೋರಾ ಈ ತಿಂಗಳ 22ರಂದು ಮಂಡಳಿ ಮುಂದೆ ಖುದ್ದು ಹಾಜರಾಗಬೇಕಿದೆ.







