ನ್ಯೂಝಿಲೆಂಡ್‌ಗೆ ಶರಣಾದ ಭಾರತ
ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿ
ಮಲೇಷ್ಯಾ, ಎ.13: ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ನ್ಯೂಝಿಲೆಂಡ್ ತಂಡದ ವಿರುದ್ಧ 1-2 ಗೋಲುಗಳ ಅಂತರದಿಂದ ಶರಣಾಗಿದೆ.
ಟೂರ್ನಿಯ ಅಂಕಪಟ್ಟಿಯಲ್ಲಿ 2 ರಿಂದ ಮೂರನೆ ಸ್ಥಾನಕ್ಕೆ ಕುಸಿದಿದೆ. ಈ ಗೆಲುವಿನ ಮೂಲಕ ನ್ಯೂಝಿಲೆಂಡ್ 11 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನವನ್ನು ವಶಪಡಿಸಿಕೊಂಡಿದೆ. 4 ಪಂದ್ಯಗಳಲ್ಲಿ ನಾಲ್ಕೂ ಪಂದ್ಯಗಳನ್ನು ಜಯಿಸಿರುವ ಆಸ್ಟ್ರೇಲಿಯ ಮೊದಲ ಸ್ಥಾನ ಕಾಯ್ದುಕೊಂಡಿದೆ. ಭಾರತ ತಂಡ ಆತಿಥೇಯ ಮಲೇಷ್ಯಾವನ್ನು ಮಣಿಸಿದರೆ ಒಟ್ಟು 11 ಅಂಕ ಗಳಿಸುವ ಮೂಲಕ ಫೈನಲ್‌ಗೆ ತಲುಪುವ ಅವಕಾಶ ಇನ್ನೂ ಮುಕ್ತವಾಗಿದೆ.
ಲೀಗ್ ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆಯಲಿರುವ ತಂಡ ಫೈನಲ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳಲಿದೆ. ನಾಲ್ಕು ಹಾಗೂ ಐದನೆ ಸ್ಥಾನ ಪಡೆಯಲಿರುವ ತಂಡ ಕಂಚಿನ ಪದಕಕ್ಕಾಗಿ ಹೋರಾಟವನ್ನು ನಡೆಸಲಿವೆ.
29ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ಕೇನ್ ರಸಲ್ ನ್ಯೂಝಿಲೆಂಡ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 36ನೆ ನಿಮಿಷದಲ್ಲಿ ಗೋಲು ಬಾರಿಸಿದ ಮನ್‌ದೀಪ್ ಸಿಂಗ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.
ಆದರೆ, 41ನೆ ನಿಮಿಷದಲ್ಲಿ ಗೋಲು ದಾಖಲಿಸಿದ ನಿಕ್ ವಿಲ್ಸನ್ ನ್ಯೂಝಿಲೆಂಡ್ 2-1 ಅಂತರದಿಂದ ಗೆಲುವು ಸಾಧಿಸಲು ನೆರವಾದರು. ವಿಲ್ಸನ್ ಟೂರ್ನಿಯಲ್ಲಿ ಬಾರಿಸಿರುವ ನಾಲ್ಕನೆ ಗೋಲು ಇದಾಗಿದೆ.
ಭಾರತ ಮೂರು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾಯಿತು. 1-2 ರಿಂದ ಶರಣಾದ ಭಾರತ ಪಂದ್ಯವನ್ನು ಸಮಬಲಗೊಳಿಸಲು ವಿಫಲ ಯತ್ನ ನಡೆಸಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5-1 ಗೋಲುಗಳ ಅಂತರದಿಂದ ಮಣಿಸಿದ್ದ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು. ಆದರೆ, ತಂಡದ ಆಟಗಾರರು ಆ ನಿರೀಕ್ಷೆ ಈಡೇರಿಸಲಿಲ್ಲ. ಪಂದ್ಯ ನಿಧಾನವಾಗಿ ಆರಂಭವಾಯಿತು. ಉಭಯ ತಂಡಗಳು ಎಚ್ಚರಿಕೆ ಆಟ ಪ್ರದರ್ಶಿಸಿದವು.
ಆರಂಭದಲ್ಲಿ ಎರಡೂ ತಂಡಗಳ ಮಿಡ್ ಫೀಲ್ಡರ್‌ಗಳು ಗೋಲು ಬಾರದಂತೆ ತಡೆಯಲು ಯಶಸ್ವಿಯಾದರು. ಭಾರತಕ್ಕೆ 21ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸುವ ಅವಕಾಶ ಲಭಿಸಿತ್ತು. ರೂಪಿಂದರ್ ಪಾಲ್ ಸಿಂಗ್ ಬಾರಿಸಿದ ಚೆಂಡನ್ನು ಗೋಲ್‌ಕೀಪರ್ ಡಿವೊನ್ ಮ್ಯಾಂಚೆಸ್ಟರ್ ತಡೆದರು. ರೂಪಿಂದರ್ ಹಾಗೂ ಹರ್ಮನ್‌ಪ್ರೀತ್ ಸಿಂಗ್ ಎರಡು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ವ್ಯರ್ಥ ಮಾಡಿದರು







