ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿ: ಮ್ಯಾಡ್ರಿಡ್ ಸೆಮಿ ಫೈನಲ್‌ಗೆ

ರೊನಾಲ್ಡೊ ಹ್ಯಾಟ್ರಿಕ್
ಮ್ಯಾಡ್ರಿಡ್, ಎ.13: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಬಾರಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಸ್ಪೇನ್‌ನ ದೈತ್ಯ ಕ್ಲಬ್ ರಿಯಲ್ ಮ್ಯಾಡ್ರಿಡ್ ಸತತ ಆರನೆ ಬಾರಿ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದೆ. ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡ ವೋಲ್ಫ್‌ಬರ್ಗ್ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿತು. ಏಕಾಂಗಿ ಪ್ರದರ್ಶನದಿಂದ ಗಮನ ಸೆಳೆದ ರೊನಾಲ್ಡೊ 15ನೆ, 17ನೆ ಹಾಗೂ 77ನೆ ನಿಮಿಷದಲ್ಲಿ ಗೋಲು ಬಾರಿಸಿದರು.
ನನ್ನ ಪಾಲಿಗೆ ಇದು ಮ್ಯಾಜಿಕ್ ರಾತ್ರಿಯಾಗಿತ್ತು. ಅಂತಿಮವಾಗಿ ಇದೊಂದು ಪರಿಪೂರ್ಣ ಪಂದ್ಯವಾಗಿತ್ತು. ಗೋಲುಗಳು ನನ್ನ ಡಿಎನ್‌ಎಯಲ್ಲಿದೆ. ತಂಡಕ್ಕಾಗಿ ಸದಾ ಕಾಲ ಗೋಲು ಬಾರಿಸುತ್ತಾ ಇರುವೆ ಎಂದು ಈ ವರ್ಷ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡ ರೊನಾಲ್ಡೊ ಪ್ರತಿಕ್ರಿಯಿಸಿದ್ದಾರೆ.
ರೊನಾಲ್ಡೊ ಮ್ಯಾಡ್ರಿಡ್ ಕ್ಲಬ್‌ನ ಪರ 37ನೆ ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿದರು. ಈ ಋತುವಿನಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ 16ನೆ ಗೋಲು ಬಾರಿಸಿದ್ದಾರೆ. 31ರ ಹರೆಯದ ರೊನಾಲ್ಡೊ ಇನ್ನೊಂದು ಗೋಲು ಬಾರಿಸಿದರೆ ಒಂದೇ ಋತುವಿನಲ್ಲಿ ಗರಿಷ್ಠ ಗೋಲು ಬಾರಿಸಿದ ಸ್ವಯಂ ದಾಖಲೆಯನ್ನು ಸರಿಗಟ್ಟಲಿದ್ದಾರೆ. 2013-14ರಲ್ಲಿ ರೊನಾಲ್ಡೊ ಒಟ್ಟು 17 ಗೋಲುಗಳನ್ನು ಬಾರಿಸಿದ್ದರು.







