ಡಾ.ಎಸ್.ಸಿ. ಮಾಂಬಳ್ಳಿಗೆ ಅಂಬೇಡ್ಕರ್ ಪ್ರಶಸ್ತಿ

ಬೆಂಗಳೂರು, ಎ.13: ರಾಜ್ಯ ಸರಕಾರದಿಂದ ನೀಡಲಾಗುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಡಾ.ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ’ಗೆ ಚಾಮರಾಜನಗರ ಜಿಲ್ಲೆಯ ಡಾ.ಎಸ್.ಚಿನ್ನಸ್ವಾಮಿ ಮಾಂಬಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯಉಪಸ್ಥಿತಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ಕವಿ ಡಾ.ಸಿದ್ಧಲಿಂಗಯ್ಯ, ಡಾ.ಎಸ್.ಚಿನ್ನಸ್ವಾಮಿ ಮಾಂಬಳ್ಳಿ ಅವರ ಹೆಸರನ್ನು ಪ್ರಕಟಿಸಿದರು.
ಪ್ರಶಸ್ತಿಯು 5ಲಕ್ಷ ರೂ.ನಗದು, ಬಂಗಾರದ ಪದಕ ಮತ್ತು ಪಾರಿತೋಷಕ ಒಳಗೊಂಡಿದ್ದು, ಗುರುವಾರ ಬೆಳಗ್ಗೆ 10:40ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಅವರು ಹೇಳಿದರು.
ಪ್ರಶಸ್ತಿ ಪುರಸ್ಕೃತರು: ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಡಾ.ಚಿನ್ನಸ್ವಾಮಿ ಮಾಂಬಳ್ಳಿ ದಲಿತ ಕುಟುಂಬದಲ್ಲಿ ಜನಿಸಿದ್ದು, ಸಿವಿಲ್ ಇಂಜಿನಿಯರ್ ಆಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಶೋಷಿತ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಅಗ್ರಗಣ್ಯ ಸಾಧಕರು ಎಂದು ಸಿದ್ದಲಿಂಗಯ್ಯ ಬಣ್ಣಿಸಿದರು.





