ಕೇಳಿದ ಸೀಟು ಸಿಗದ್ದಕ್ಕೆ ರೈಲನ್ನೇ ನಿಲ್ಲಿಸಿದ ಶಿವಸೇನಾ ಶಾಸಕ !

ಮುಂಬೈ, ಎ. 14: 2,000 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲೊಂದನ್ನು ಇಲ್ಲಿನ ಛತ್ರಪತಿ ಶಿವಾಜಿ ಟರ್ಮಿನಸ್ ನಲ್ಲಿ ಶಿವಸೇನೆಯ ಶಾಸಕನೊಬ್ಬ ಸುಮಾರು ಒಂದು ಗಂಟೆ ಕಾಲ ತಡೆದು ನಿಲ್ಲಿಸಿದ ಇತ್ತೀಚಿಗೆ ನಡೆದಿದೆ. ಈ ರಾದ್ಧಾಂತಕ್ಕೆ ಕಾರಣ - ಆ ಶಾಸಕನಿಗೆ ಆತನ ಇಚ್ಛೆಯಂತೆ ರೈಲಿನಲ್ಲಿ ಬದಿಯ ಸೀಟು ನೀಡದೇ ಇದ್ದದ್ದು !
ಶಿವಸೇನೆಯ ಶಾಸಕ ಹೇಮಂತ್ ಪಾಟೀಲ್ ಹಾಗು ಅವರ ಸಹಾಯಕ ತಮಗೆ ನೀಡಲಾದ ಸೀಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿ ನಿರ್ದಿಷ್ಟ ಬೇರೆ ಸೀಟಿಗಾಗಿ ಹಠ ಹಿಡಿದರು. ಈ ಸಂದರ್ಭದಲ್ಲಿ ರೈಲು ಹೊರಡದಂತೆ ತಡೆಯಲು ತಮ್ಮ ಜೊತೆ ಬಂದ ಗುಂಪಿನ ಮೂಲಕ ನಿರಂತರವಾಗಿ ರೈಲಿನ ಚೈನ್ ಎಳೆಸುತ್ತಿದ್ದರು. ಇದರಿಂದ ರಾತ್ರಿ 9.10ಕ್ಕೆ ಹೊರಡಬೇಕಿದ್ದ ರೈಲು 9. 57 ಕ್ಕೆ ಹೊರಡಬೇಕಾಯಿತು. ಆದರೆ ಮತ್ತೆ ಅದನ್ನು ಮಸ್ಜಿದ್ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಅಲ್ಲಿಂದ ಮತ್ತೆ 10.06 ಕ್ಕೆ ರೈಲು ಹೊರಟಿತು. ಆದರೂ ಶಾಸಕರ ಸೀಟಿನ ಸಮಸ್ಯೆ ಮುಗಿದಿರಲಿಲ್ಲ. ಇದರಿಂದ ಇನ್ನೆರಡು ದೀರ್ಘ ಪ್ರಯಾಣದ ರೈಲುಗಳು - ಸಿ ಎಸ್ ಟಿ ಮಂಗಳೂರು ಎಕ್ಸ್ ಪ್ರೆಸ್ ಹಾಗು ಸಿದ್ದೇಶ್ವರ್ ಎಕ್ಸ್ ಪ್ರೆಸ್ ಗಳು ತಡವಾಗಿ ಹೊರಡಬೇಕಾಯಿತು. ರಾತ್ರಿಯ ನಾಲ್ಕು ಲೋಕಲ್ ರೈಲುಗಳೂ ತಡವಾಗಿ ಹೊರಡಬೇಕಾಯಿತು. ಇದರಿಂದ ಸಾವಿರಕ್ಕೂ ಹೆಚ್ಚು ಮಂದಿ ರೈಲ್ವೆ ಪ್ಲಾಟ್ ಫಾರ್ಮ್ ಗಳಲ್ಲಿ ಬಾಕಿಯಾದರು.
ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಾತ್ರ ರೈಲ್ವೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ.
" ನೀತಿ ನಿಯಮಗಳು ಕೇವಲ ಪ್ರಯಾಣಿಕರಿಗೆ ಮಾತ್ರ ಇವೆಯೇ ? ಶಾಸಕರುಗಳಿಗೆ ನಿಯಮವಿಲ್ಲವೇ " ಎಂದು ಪ್ರಯಾಣಿಕ ಸುಹಾಸ್ ಪಾಟೀಲ್ ಪ್ರಶ್ನಿಸಿದ್ದಾರೆ.





