ಸಮಾನತೆ, ಸಹೋದರತೆಯ ಸಂದೇಶಗಳು ಅನುಷ್ಠಾನವಾಗಲಿ: ನಾಗವಾರ
ಬೆಳ್ತಂಗಡಿ: ಡಾ.ಅಂಬೇಡ್ತರ್ ಜಯಂತಿ ಆಚರಣೆ

ಬೆಳ್ತಂಗಡಿ, ಎ. 14: ಅಧ್ಯಯನ ಮತ್ತು ಹೋರಾಟಗಳ ಮೂಲಕ ಅಂಬೇಡ್ಕರ್ ಅವರು ನಡೆಸಿದ ಬದುಕು ಮನುಕುಲಕ್ಕೆ ಆದರ್ಶಪ್ರಾಯವಾಗಿದೆ. ಅವರು ಸಂವಿಧಾನದ ಮೂಲಕ ಮುಂದಿಟ್ಟ ಸಮಾನತೆ ಸಹೋದರತೆಯ ಸಂದೇಶಗಳು ಇನ್ನೂ ನಿಜವಾದ ರೀತಿಯಲ್ಲಿ ಅನುಷ್ಠಾನವಾಗಿಲ್ಲ. ಇದು ದೇಶಕ್ಕೆ ಇಂದಿನ ದಿನಗಳಲ್ಲಿ ಹೆಚ್ಚು ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ಬೆಳ್ತಂಗಡಿಯ ಗುರುನಾರಾಯಣ ಸಬಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಬೆಳ್ತಂಗಡಿ, ನಗರ ಪಂಚಾಯತ್ ಬೆಳ್ತಂಗಡಿ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಜ್ಞಾನದ ಖನಿಯಾಗಿದ್ದರು. ಅವರನ್ನು ಓದುವ ಪ್ರವೃತ್ತಿ ಇದೀಗ ವಿಶ್ವವಿದ್ಯಾನಿಲಯಗಳಲ್ಲಿ ಬೆಳೆಯುತ್ತಿದೆ. ಜಗತ್ತು ಅವರನ್ನು ಅರ್ಥಮಾಡಿಕೊಳ್ಳುತ್ತಿದೆ. ಇದು ಉತ್ತಮ ಬೆಳವಣಿಗೆಗಳಾಗಿದೆ ಎಂದರು. ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಹೋರಾಟ ನಡೆಸಿದ ರೀತಿಯಲ್ಲಿಯೇ ಮಹಿಳೆಯರ ಹಕ್ಕುಗಳಿಗಾಗಿಯೂ ಅವರು ಧ್ವನಿಯೆತ್ತಿದ್ದರು. ಅಂದಿನ ದಿನಗಳಲ್ಲಿಯೇ ಮಹಿಳೆಯರು ಸೇರಿದಂತೆ ಎಲ್ಲರಿಗೂ ಮತದಾನದ ಅವಕಾಶವನ್ನು ಹಾಗೂ ಸಮಾನವಾದ ಹಕ್ಕುಗಳನ್ನು ನೀಡಿದರು. ಶೋಷಿತರಿಗೆ ಮೀಸಲಾತಿಯ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಶಕ್ತಿ ತುಂಬುವ ಅತ್ಯಂತ ಕ್ರಾಂತಿಕಾರಕಾರಕವಾದ ಸಂವಿಧಾನವನ್ನು ಭಾರತಕ್ಕೆ ನೀಡುವ ಮೂಲಕ ಸ್ವತಂತ್ರ ಭಾರತಕ್ಕೆ ಭದ್ರ ಭುನಾದಿನ್ನು ಹಾಕುವ ಕಾರ್ಯವನ್ನು ಅವರು ಮಾಡಿದರು. ಅಂಬೇಡ್ಕರ್ ಅವರ ಸಮಾನತೆಯ ಕನಸು ಇನ್ನೂ ಈಡೇರಿಕೆಯಾಗಿಲ್ಲ. ಎಷ್ಟೋ ದೇವಸ್ಥಾನಗಳಲ್ಲಿ ಇನ್ನೂ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ನಾಗವಾರ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ಬೆಳ್ತಂಗಡಿ ನಗರದಲ್ಲಿ ಒಂದುವರೆ ಕೋಟಿ ರೂ. ವೆಚ್ಚದಲ್ಲಿ ನೂತನ ಅಂಬೇಡ್ಕರ್ ಭವನ ಮಂಜೂರಾಗಿದೆ. ಅಲ್ಲದೆ ವೇಣೂರು ಹಾಗೂ ಕೊಕ್ಕಡ ಹೋಬಳಿ ಕೇಂದ್ರಗಳಿಗೆ ತಲಾ 50 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಭವನಗಳು ಹಾಗೂ ಪುದುವೆಟ್ಟು, ಕೊಕ್ರಾಡಿ, ಕೊಯ್ಯೂರು, ಕಳಿಯ ಹಾಗೂ ಕುಕ್ಕೇಡಿಯಲ್ಲಿ ತಲಾ 10 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಭವನಗಳು ಮಂಜೂರಾಗಿರುವುದಾಗಿಯೂ ಅವರು ಪ್ರಕಟಿಸಿದರು. ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಶೀಲ್ದಾರ್ ಪ್ರಸನ್ನಮೂರ್ತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ಭಟ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ. ಆರ್.ಲಿಂಗಪ್ಪ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜೆಸ್ಸಿಂತಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇಲಾಖೆಯ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ಜಿಪಂ, ತಾಪಂ ಚುನಾವಣೆಯಲ್ಲಿ ವಿಜೇತರಾದ ದಲಿತ ಸಮುದಾಯಗಳ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಮೋಹನ್ ಸ್ವಾಗತಿಸಿದರು, ಜಯಾನಂದ ವಂದಿಸಿದರು.
ಅಂದು ಗಾಂಧೀಜಿಯವರು ಕರಾವಳಿಗೆ ಬಂದಾಗ ಕುದ್ಮುಲ್ ರಂಗರಾವ್ ಅವರು ದಲಿತ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿದ ವಿದ್ಯಾರ್ಥಿನಿಲಯವನ್ನು ಕಂಡು ಸಂತಸಪಟ್ಟಿದ್ದರು.ಆದರೆ ಉಡುಪಿಯಲ್ಲಿ ದಲಿತರಿಗೆ, ಶೂದ್ರರಿಗೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸುವ ಪ್ರವೃತ್ತಿಯನ್ನು ನೋಡಿ ದೇವಸ್ಥಾನಕ್ಕೆ ಪ್ರವೇಶಿಸದೆ ಹಿಂದಿರುಗಿದ್ದರು. ಇಂದಿಗೂ ದೇಶದ ಹಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ ಇದು ದುರಂತ.-ಕಾಳೇಗೌಡ ನಾಗವಾರ







