ಪಜೀರು: ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

ಪಜೀರುವಿನಲ್ಲಿ ನೂತನ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಜಿ.ಪಂ.ಸದಸ್ಯೆ ಮಮತಾ ಗಟ್ಟಿ ಶಿಲಾನ್ಯಾಸ ನೆರವೇರಿಸಿದರು.
ಕೊಣಾಜೆ: ಪಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಯಕೋಡಿ ಎಂಬಲ್ಲಿ ಗ್ರಾ.ಪಂ.ನ ಉದ್ಯೋಗ ಖಾತರಿ ಹಾಗೂ ಇಲಾಖಾ ಅನುದಾನದ ಒಟ್ಟು 12 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಅಂಗನವಾಡಿ ಕೇಂದ್ರದ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಬುಧವಾರ ನಡೆಯಿತು.
ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಅವರು ಗ್ರಾಮದ ಜನರು ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಿದರೆ, ಒಗ್ಗಟ್ಟಾದರೆ ಮಾತ್ರ ಗ್ರಾಮದ ಅಭಿವೃದ್ದಿ ಪರಿಪೂರ್ಣವಾಗಿ ನಡೆಯಲು ಸಾಧ್ಯ. ಈಗಾಗಲೇ ಪಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ದಿ ಕೆಲಸಗಳು ನಡೆದಿದ್ದು ಇದೀಗ ಈ ಭಾಗದ ಜನರ ಬೇಡಿಕೆಯಂತೆ ನೂತನ ಅಂಗನವಾಡಿ ಕೇಂದ್ರದ ನಿರ್ಮಾಣದ ಕೆಲಸ ಶೀಘ್ರವಾಗಿ ನಡೆದು ಗ್ರಾಮದ ಜನತೆಗೆ ಅನುಕೂಲವಾಗಲಿದೆ ಎಂದು ಹೇಳಿದರು. ಇಂದು ಸರಕಾರವು ಹಲವಾರು ಜನಪರ ಯೋಜನೆಗಳನ್ನು ಅಂಗನವಾಡಿಯ ಮುಖಾಂತರ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಪ್ರಮುಖವಾಗಿ ಮಕ್ಕಳಿಗೆ, ಗರ್ಭಿನಿಯರಿಗೆ,ಬಾಣಂತಿಯರಿಗೆ, ಮಹಿಳೆಯರಿಗೆ ನಾನಾ ರೀತಿಯ ಅನೂಕೂಲತೆಗಳು ಇಲ್ಲಿ ಲಭ್ಯವಿದೆ. ಇಂತಹ ಯೋಜನೆಗಳ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಜೀರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಮಾತನಾಡಿ, ಕಳೆದ ಹಲವು ವರ್ಷದಿಂದ ಪಜೀರಿಗೆ ಚೆನ್ನಯ ಕೋಡಿ ಎಂಬಲ್ಲಿ ಅಂಗನವಾಡಿ ಕೇಂದ್ರ ಇಲ್ಲದೆ ಬಹಳಷ್ಟು ಸಮಸ್ಯೆ ಎದುರಾಗಿತ್ತು. ಬಳಿಕ ಸ್ಥಳೀಯ ಬಾಡಿಗೆ ಕಟ್ಟಡವೊಂದರಲ್ಲಿ ಕೇಂದ್ರವನ್ನು ನಡೆಸಲಾಗುತ್ತಿತ್ತು. ಇದೀಗ ನೂತನ ಕಟ್ಟಡದ ಶಿಲಾನ್ಯಾಸವು ನೆರವೇರಿದ್ದು ಆದಷ್ಟು ಬೇಗ ಕೇಂದ್ರವು ಉದ್ಘಾಟನೆಗೊಂಡು ಜನರಿಗೆ ಅನುಕೂಲವಾಗುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರಾದ ಉಮ್ಮರ್ ಪಜೀರು, ಗ್ರಾಮ ಪಂಚಾಯಿತಿ ಸದಸ್ಯರಾದ ಇಂತಿಯಾರ್, ಮಾಜಿ ಅಧ್ಯಕ್ಷರಾದ ಫ್ಲೋರಿನಾ ಡಿಸೋಜಾ, ಮೂಸಾ ಹಾಜಿ, ಪಂಚಾಯಿತಿ ಸದಸ್ಯ ರಫೀಕ್, ಮೊಹಿಯ್ಯುದ್ದೀನ್ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಅಝೀಜ್ ಮುಂತಾದವರು ಉಪಸ್ಥಿತರಿದ್ದರು.





