ಗೋಲಿಬಾರ್‌ಗೆ ಬಲಿಯಾದ ಕಾಶ್ಮೀರಿ ಕ್ರಿಕೆಟಿಗ ಫೋಟೊ ತೆಗೆಯಲು ನಿಂತಿದ್ದ!

ಹಂದ್ವಾರಾ,ಎ.14: ಎರಡು ದಿನಗಳ ಹಿಂದೆ ಕಾಶ್ಮೀರದ ಹಂದ್ವಾರಾದಲ್ಲಿಯ ತನ್ನ ಎರಡಂತಸ್ತಿನ ಮನೆಯಿಂದ ಹೊರಬಿದ್ದಿದ್ದ ಯುವ ಕ್ರಿಕೆಟಿಗ ನಯೀಮ್(19)ಗೆ ತಾನು ಆ ಮನೆಗೆ ಮತ್ತೆ ವಾಪಸಾಗುವುದಿಲ್ಲ ಎನ್ನುವುದು ಗೊತ್ತಿರಲಿಲ್ಲ.
ಯೋಧನೋರ್ವ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪಗಳ ಹಿನ್ನೆಲೆಯಲ್ಲಿ ಆಕ್ರೋಶಿತ ಗುಂಪೊಂದು ಮಾರ್ಗಮಧ್ಯೆ ಸೇನಾನೆಲೆಯೊಂದರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದು, ತನ್ನ ಮೊಬೈಲ್‌ನಲ್ಲಿ ಆ ದೃಶ್ಯದ ಚಿತ್ರವನ್ನು ತೆಗೆಯಲೆಂದು ನಿಂತಿದ್ದೇ ನಯೀಮ್ ಮಾಡಿದ ತಪ್ಪಾಗಿತ್ತು. ಉದ್ರಿಕ್ತ ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿಗಳು ನಡೆಸಿದ ಗೋಳಿಬಾರ್ ಆತನ ಪ್ರಾಣವನ್ನೇ ಬಲಿ ತೆಗೆದುಕೊಂಡಿತ್ತು.
ಸ್ಥಳೀಯ ಸುದ್ದಿಸಂಸ್ಥೆಗಾಗಿ ಕಾರ್ಯ ನಿರ್ವಹಿಸುತ್ತಿರುವ ನಯೀಮ್ ಸೋದರನ ಮೊಬೈಲ್ ಫೋನ್‌ಗೆ ಈ ಬಗ್ಗೆ ಕರೆ ಬಂದಾಗ ಆತ ದೊಂಬಿಯಲ್ಲಿ ಗಾಯಗೊಂಡವರ ಬಗ್ಗೆ ವರದಿ ಮಾಡುತ್ತಿದ್ದ.
ಕಾಶ್ಮೀರ ಜಿಮಖಾನಾ ಕ್ಲಬ್ ಪರ ಆಡುತ್ತಿದ್ದ ನಯೀಮ್ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ತರಬೇತಿ ಪಡೆಯುತ್ತಿದ್ದ. ಆತನನ್ನು ‘ಹಂದ್ವಾರಾದ ಸಚಿನ್ ತೆಂಡುಲ್ಕರ್’ಎಂದು ಕರೆಯಲಾಗುತ್ತಿದ್ದು, ಅದರಲ್ಲಿ ಯಾವುದೇ ಉತ್ಪ್ರೇಕ್ಷೆಯಿರಲಿಲ್ಲ ಎನ್ನುತ್ತಾರೆ ಆತನ ಸಹಕ್ರಿಕೆಟಿಗರು.
ಮೂರು ವರ್ಷಗಳ ಹಿಂದೆ 19ಕ್ಕಿಂತ ಕೆಳಗಿನ ವಯೋಮಾನದವರಿಗಾಗಿ ಏರ್ಪಡಿಸಲಾಗಿದ್ದ ರಾಷ್ಟ್ರಮಟ್ಟದ ಶಿಬಿರದಲ್ಲಿ ನಯೀಮ್ ಭಾಗಿಯಾಗಿದ್ದ. ಭಯೋತ್ಪಾದನೆಯ ಕರಿನೆರಳಿನಲ್ಲಿರುವ ಕುಪ್ವಾರಾ ಪ್ರದೇಶದಿಂದ ಮೊದಲ ಬಾರಿಗೆ ಆಯ್ಕೆಯಾದ ಕ್ರಿಕೆಟಿಗ ಎಂಬ ಹೆಗ್ಗಳಿಕೆ ನಯೀಮ್‌ದಾಗಿತ್ತು.







