ಉಳ್ಳಾಲ :ರಾಜು ಕೊಲೆ ಪ್ರಕರಣ: ಇಬ್ಬರ ಸೆರೆ
ಮಂಗಳೂರು, ಎ. 14: ಉಳ್ಳಾಲ ಮೊಗವೀರಪಟ್ನದಲ್ಲಿ ಮಂಗಳವಾರ ನಡೆದ ರಾಜು ಕೊಟ್ಯಾನ್ ಎಂಬವರ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಮೂವರನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತರನ್ನು ಉಳ್ಳಾಲ ಗ್ರಾಮದ ನಿವಾಸಿಗಳಾದ ಮುಹಮ್ಮದ್ ಅಸ್ವೀರ್ ಯಾನೆ ಅಚ್ಚು (19), ಅಬ್ದುಲ್ ಮುತ್ತಾಲಿಕ್ ಯಾನೆ ಮುತ್ತು (20) ಎಂದು ಗುರುತಿಸಲಾಗಿದೆ.
ಎಪ್ರಿಲ್ 12ರಂದು ಬೆಳಗ್ಗಿನ ಜಾವ ಸುಮಾರು 2:40ಕ್ಕೆ ಉಳ್ಳಾಲ ಮೊಗವೀರ ಪಟ್ನ ನಿವಾಸಿ ರಾಜೇಶ್ ಕೋಟ್ಯಾನ್ ಯಾನೆ ರಾಜು ಎಂಬವರು ಎಂದಿನಂತೆ ಮೀನುಗಾರಿಕೆ ಕೆಲಸಕ್ಕೆಂದು ಮನೆಯಿಂದ ಉಳ್ಳಾಲ ಕೋಟೆಪುರ ಜೆಟ್ಟಿ ಕಡೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕೋಟೆಪುರ ಬರಕಾ ಓವರ್‌ಸೀಸ್ ಫ್ಯಾಕ್ಟರಿ ಬಳಿ ಕೊಲೆ ಮಾಡಿದ್ದರು. ಈ ಬಗ್ಗೆ ಮೃತರ ಸಹೋದರ ಜಗದೀಶ್ ಕೋಟ್ಯಾನ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಎ.ಸಿ.ಪಿ. ಕಲ್ಯಾಣ್ ಶೆಟ್ಟಿ ಮತ್ತು ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ, ಅಶೋಕ್, ಪಿ.ದಿನಕರ್ ಶೆಟ್ಟಿ ಮತ್ತು ಪಿಎಸ್‌ಐಗಳಾದ ಶ್ಯಾಮಸುಂದರ್, ಭಾರತಿ, ರಾಜೇಂದ್ರ ಅವರನ್ನೊಳಗೊಂಡ ತಂಡಗಳನ್ನು ರಚಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾನೆನ್ನಲಾದ ಮುಹಮ್ಮದ್ ಅಸ್ವೀರ್ ಯಾನೆ ಅಚ್ಚು ಹಾಗೂ ಅಬ್ದುಲ್ ಮುತಾಲಿಕ್ ಸಹಿತ ಬಾಲಕನೊರ್ವನನ್ನು ಇಂದು ಮಧ್ಯಾಹ್ನ 3ಗಂಟೆಗೆ ಸೋಮೇಶ್ವರ ರೈಲ್ವೆ ನಿಲ್ದಾಣದ ಬಳಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.





