ಮುಸ್ಲಿಮ್ ಹಾಸ್ಟೆಲ್ ಪದಾಧಿಕಾರಿ ಚುನಾವಣೆ
ರಾಜಕೀಯ ಮುಖಂಡನ ಹಸ್ತಕ್ಷೇಪಕ್ಕೆ ಅಸಮಾಧಾನ
ಶಿವಮೊಗ್ಗ, ಎ. 14: ಮುಸ್ಲಿಂ ಹಾಸ್ಟೆಲ್ ಪದಾಧಿಕಾರಿಗಳ ಆಯ್ಕೆಗೆ ಎ. 16 ರಂದು ನಿಗದಿಯಾಗಿರುವ ಚುನಾವಣೆಗೆ ಸಂಬಂಧಿಸಿದಂತೆ, ಪ್ರಮುಖ ರಾಜಕೀಯ ಪಕ್ಷವೊಂದರ ನಾಯಕರೊಬ್ಬರು ಹಸ್ತಕ್ಷೇಪ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಮುಸ್ಲಿಂ ಹಾಸ್ಟೆಲ್ ಮ್ಯಾನೇಜ್‌ಮೆಂಟ್ ಕಮಿಟಿ (ಎಂ.ಎಚ್.ಎಂ.ಸಿ.) ಯ ಚುನಾಯಿತ ನಿರ್ದೇಶಕ ಸೈಯದ್ ಮುಜೀಬುಲ್ಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಗುರುವಾರ ಅವರು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದಾರೆ. ಮುಸ್ಲಿಂ ಸಮಾಜದ ಸಂಸ್ಥೆಗಳನ್ನು ರಾಜಕೀಯ ತೃಷೆಗೆ ಬಳಸಿಕೊಳ್ಳುವ ಕೆಲಸ ಕೈಬಿಡಬೇಕು. ಹಾಗೆಯೇ ಚುನಾಯಿತ ನಿರ್ದೇಶಕರಾದ ನಾವು ಕೂಡ ರಾಜಕೀಯ ಲಾಬಿಗೆ ಒಳಗಾಗದೆ, ಸಮಾಜ ಬಾಂಧವರು ನಮ್ಮ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಂಡು ಹೋಗಬೇಕಾಗಿದೆ. ಒಂದು ವೇಳೆ ರಾಜಕಾರಣ ಮಾಡಲು ಮುಂದಾದರೆ ಮುಂದಿನ ದಿನಗಳಲ್ಲಿ ನಾವು ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಸ್ತಕ್ಷೇಪ:
ಪ್ರಭಾವಿ ಪಕ್ಷದ ರಾಜಕೀಯ ಮುಖಂಡರೊಬ್ಬರು ಇತ್ತೀಚೆಗೆ ರಾತ್ರಿ ವೇಳೆ ಕೆಲ ಚುನಾಯಿತ ಪ್ರತಿನಿಧಿಗಳನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಗೌಪ್ಯ ಸಭೆ ನಡೆಸಿದ್ದಾರೆ. ತಾವು ಸೂಚಿಸಿದ ನಿರ್ದೇಶಕರನ್ನೇ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಸ್ಥಾನಗಳಿಗೆ ಆಯ್ಕೆ ಮಾಡಬೇಕು. ಸಮಾಜದಿಂದ ಚುನಾಯಿತರಾಗಿರುವ ನಿರ್ದೇಶಕರು ನ್ಯಾಯಸಮ್ಮತ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ರಾಜಕೀಯ ಸ್ವಾರ್ಥಕ್ಕಾಗಿ ಈ ಚುನಾವಣೆಯಲ್ಲಿ ರಾಜಕಾರಣ ಮಾಡಲು ಮುಂದಾಗಿರುವುದು ಸರಿಯಲ್ಲ. ಪ್ರಬುದ್ಧ ರಾಜಕಾರಣಿ ಎಂದು ಗುರುತಿಸಿಕೊಳ್ಳುವ ಇವರು, ಮುಸ್ಲಿಂ ಸಮಾಜದ ಎಷ್ಟು ಜನರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ಕಲ್ಪಿಸಿದ್ದಾರೆ ಎಂಬುದನ್ನು ಹೇಳಲಿ. ಹಾಗೂ ಸಮಾಜದ ಹಿತಾಸಕ್ತಿಯಲ್ಲಿ ರಾಜಕಾರಣ ಮಾಡಲು ಹೊರಟಿರುವುದು ಎಷ್ಟು ಸಮಂಜಸ ಎಂಬುವುದನ್ನು ತಿಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ಚುನಾಯಿತ ಸದಸ್ಯರಿಂದ ಬರೆಯಿಸಿಕೊಳ್ಳಲಾಗಿರುವ ಮುಚ್ಚಳಿಕೆ ಪತ್ರಗಳನ್ನು ತಕ್ಷಣವೇ ಈ ರಾಜಕೀಯ ನಾಯಕರು ವಾಪಸ್ ಕೊಡಬೇಕು. ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಪತ್ರಿಕಾ ಪ್ರಕಟನೆಯಲ್ಲಿ ಸೈಯದ್ ಮುಜೀಬುಲ್ಲಾರವರು ಆಗ್ರಹಿಸಿದ್ದಾರೆ.







