ಸಮಾನತೆ ಕಾಯ್ದೆಯಿಂದ ಬರಲು ಸಾಧ್ಯವಿಲ್ಲ: ಡಿಸಿ ಘೋಷ್

ಕಾರವಾರ, ಎ.14: ಪ್ರತಿಯೊಬ್ಬರ ಮನಸ್ಥಿತಿಯಲ್ಲಿ ಬದಲಾವಣೆ ಉಂಟಾದರೆ ಮಾತ್ರ ದೇಶದಲ್ಲಿ ಸಮಾನತೆ ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು ಅಭಿಪ್ರಾಯಪಟ್ಟರು
ಅವರು ಗುರುವಾರ ಜಿಲ್ಲಾ ರಂಗಮಂದಿರದಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ
ರಾಂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಸ್ವಾತಂತ್ರ್ಯ ಬಳಿಕ ಬಹಳಷ್ಟು ಬದಲಾವಣೆಗಳು ಉಂಟಾಗಿವೆ. ಆದರೂ ಇಂದಿಗೂ ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯ ಸಮಾಜದಲ್ಲಿ ಇರುವುದು ವಿಷಾದನೀಯ. ನಾವು ಪ್ರತಿಯೊಬ್ಬರನ್ನೂ ಸಮಾನವಾಗಿ ಪರಿಗಣಿಸುತ್ತಿದ್ದೇವೆ ಎಂದು ಪ್ರಾಮಾಣಿಕವಾಗಿ ಹೃದಯ ಮುಟ್ಟಿ ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸಮಾನತೆಯ ಸಮಾಜ ಕಟ್ಟಲು ನಾವು ಇನ್ನಷ್ಟು ಪಯಣಿಸುವ ಅಗತ್ಯವಿದೆ ಎಂದರು. ಸಮಾನತೆ ಕಾಯ್ದೆಯಿಂದ ಬರಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಮನೋಭಾವ ಬದಲಾವಣೆ ಅಗತ್ಯವಿದೆ. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಸಂಕಲ್ಪವನ್ನು ಇಂದಿನ ದಿನ ನಾವೆಲ್ಲರೂ ತಳೆಯಬೇಕಿದೆ. ಬಾಬು ಜಗಜೀವನರಾಮ್ ಅವರು ದೀನ ದಲಿತರ, ಶೋಷಿತರ ಕಲ್ಯಾಣಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಧೀಮಂತ ನಾಯಕ ಎಂದು ಅವರು ಬಣ್ಣಿಸಿದರು.
ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿದ ಲೇಖಕಿ ಡಾ.ಬಿ.ಆರ್.ಅನುಪಮಾ, ಸಮಾನತೆ ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲೂ ಉಂಟಾಗಬೇಕು ಎಂಬುವುದು ಅಂಬೇಡ್ಕರ್ ನಿಲುವಾಗಿತ್ತು. ಎಲ್ಲವನ್ನೂ ಪ್ರಶ್ನಿಸುವ ಮನೋಭಾವ ಬೆಳೆಯಬೇಕಿದೆ. ಅಂಬೇಡ್ಕರ್ ಚಿಂತನೆಗಳು ಪ್ರೀತಿಯ ಸೆಲೆಯಾಗಿ ನಮ್ಮಿಳಗೆ ಇಳಿಯಬೇಕಿದೆ ಎಂದು ಆಶಿಸಿದರು.
*ಪುಸ್ತಕ ಬಿಡುಗಡೆ: ವಾರ್ತಾ ಇಲಾಖೆ ವತಿಯಿಂದ ಪ್ರಕಟಿಸಲಾಗಿರುವ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಕೃತಿಯನ್ನು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ನಗರಸಭೆ ಅಧ್ಯಕ್ಷ ಗಣಪತಿ ವಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಂಭುಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಲ್ಲಾಭಕಶ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜಗಜೀವನರಾಮ್ ಭಾವಚಿತ್ರಗಳನ್ನು ಒಳಗೊಂಡ ಮೆರವಣಿಗೆಗೆ ನಗರಸಭೆ ಅಧ್ಯಕ್ಷರು ಚಾಲನೆ ನೀಡಿದರು.







